ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮೊದಲ ಎಲಿಮಿನೇಷನ್ ನಡೆದೇ ಹೋಗಿದೆ. ದೊಡ್ಮನೆ ಒಳಗೆ ಹೋಗುವ ಮುನ್ನವೇ ಪ್ರಥಮಾ ಪ್ರಸಾದ್ ಹೊರಗೆ ಬರುವಂತಾಗಿದೆ. ಈ ಬಾರಿ ವಿಮಾನದ ಥೀಮ್‌ನಲ್ಲಿ ಬಿಗ್‌ಬಾಸ್ ಮೊದಲ ಆಟ ಶುರುವಾಗಿತ್ತು. ಹಾಗಾಗಿ ವಿಮಾನದಿಂದ ಪ್ರಥಮಾ ಮನೆ ಒಳಗೆ ಹೋಗುವ ಅವಕಾಶ ಪಡೆಯಲೇ ಇಲ್ಲ.
ಮೊದಲ ವಾರ ವಿಮಾನದಲ್ಲಿದ್ದ 8 ಮಂದಿ ಕೂಡ ನಾಮಿನೇಟ್ ಆಗಿದ್ದರು. ಅವರಲ್ಲಿ ಒಬ್ಬೊಬ್ಬರಾಗಿ ಎಲ್ಲರನ್ನು ಮನೆ ಒಳಗೆ ಕಳುಹಿಸಿದ ಸುದೀಪ್ ಅಂತಿಮವಾಗಿ ಪ್ರಥಮಾ ಅವರನ್ನು ಹೊರಗೆ ಕರೆಸಿದರು. ಕಿರಣ್, ಪ್ರಥಮಾ, ಸೌಂದರ್ಯ, ಧನುಷ್, ಅವಿನಾಶ್, ಆಸಿಯಾ, ವೈಷ್ಣವಿ, ಮಂಜ ಹಾಗೂ ಓಂ ಪ್ರಕಾಶ್ ರಾವ್ ಎಲಿಮಿನೇಟ್ ಪಟ್ಟಿಯಲ್ಲಿದ್ದರು. 6 ಮಂದಿಯನ್ನು ಒಬ್ಬೊಬ್ಬರಾಗಿ ಸೇವ್ ಮಾಡಿ ಮನೆ ಒಳಗೆ ಕಳುಹಿಸಿದ ಕಿಚ್ಚ ಅಂತಿಮವಾಗಿ ಪ್ರಥಮಾ ಹಾಗೂ ಕಿರಣ್ ಕಣ್ಣಿಗೆ ಬಟ್ಟೆ ಕಟ್ಟಿಸಿದರು. ಬಳಿಕ ಇಬ್ಬರಲ್ಲಿ ಒಬ್ಬರು ಜರ್ನಿ ಮುಗಿಸಿದ್ದನ್ನು ತಿಳಿಸಿದರು.
ನಟಿ ವಿನಯಾ ಪ್ರಸಾದ್ ಪುತ್ರಿ ಪ್ರಥಮಾ ನಟಿಯಾಗಿ, ನೃತ್ಯ ಕಲಾವಿದೆಯಾಗಿ ಗುರ್ತಿಸಿಕೊಂಡಿದ್ದಾರೆ. ಬಿಗ್‌ಬಾಸ್ ಮನೆ ಒಳಗೆ ಹೋಗದೇ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿರುವುದು ಇದೇ ಮೊದಲು. ಮೊದಲ ಸ್ಪರ್ಧಿಗಳು ಎರಡು ಗುಂಪಾಗಿದ್ದರು. ಒಂದು ಮನೆ ಒಳಗೆ ಇರುವವರ ಗುಂಪು.. ಮತ್ತೊಂದು ವಿಮಾನದ ಒಳಗೆ ಇದ್ದವರ ಗುಂಪು.. ಪ್ರಥಮಾ ಕೊನೆಯವರೆಗೂ ವಿಮಾನದಲ್ಲೇ ಉಳಿಯುವಂತಾಯಿತು. ಬಿಗ್‌ಬಾಸ್ ಅಂದ್ರೆ ಎಂಟರ್‌ಟೈನ್‌ಮೆಂಟ್.. ಮಜಾ ಕೊಡಬೇಕು, ಕ್ಯಾಮರಾ ಮುಂದೆ ಕಾಣಿಸಿಕೊಳ್ಳಬೇಕು. ಹೇಗಾದರೂ ತಮ್ಮ ಇರುವಿಕೆ ಸಾಬೀತು ಮಾಡಿಕೊಳ್ಳಬೇಕು. ಆದರೆ ಪ್ರಥಮಾ ಈ ವಿಚಾರದಲ್ಲಿ ಹಿಂದೆ ಬಿದ್ದರು. ಹಾಗಾಗಿ ಮೊದಲ ವಾರವೇ ಎಲಿಮಿನೇಟ್ ಆಗಿದ್ದಾರೆ.