ಬಿಗ್‌ಬಾಸ್ ಕನ್ನಡ ಸೀಸನ್ 13 ಶೋ ಸಖತ್ ಮಜಾ ಕೊಡ್ತಿದೆ. ಈ ವಾರಿ ವಿಮಾನದ ಕಾನ್ಸೆಪ್ಟ್ ಹೊಸದಾಗಿದ್ದು ಕುತೂಹಲ ಮೂಡಿಸಿದೆ. ಕೆಲವರು ಇನ್ನು ವಿಮಾನದಿಂದ ಹೊರ ಬರಲು ಹರಸಾಹಸ ಮಾಡುತ್ತಿದ್ದಾರೆ. ಅದಕ್ಕಾಗಿ ಟಾಸ್ಕ್ ಆಡಲು ಪಟ್ಟು ಹಿಡಿಯುವಂತಾಗಿದೆ. ಆದರೆ ಅವಕಾಶವನ್ನು ಅಷ್ಟು ಸುಲಭವಾಗಿ ಕಳೆದುಕೊಳ್ಳಲು ಯಾರು ಸಿದ್ಧರಿಲ್ಲ.

ಹೊಸ ಪ್ರೋಮೊದಲ್ಲಿ ಟಾಸ್ಕ್ ವಿಚಾರಕ್ಕೆ ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಫಿರ್ದೋಸ್ ನಡುವೆ ಜಟಾಪಟಿ ಶುರುವಾಗಿದೆ. ಈಗಾಗಲೇ ಎರಡು ಟಾಸ್ಕ್‌ಗಳಲ್ಲಿ ತಲಾ ಒಂದನ್ನು ಮನೆಯೊಳಗಿನ ಸ್ಪರ್ಧಿಗಳು ಹಾಗೂ ವಿಮಾನದ ಪ್ರಯಾಣಿಕರು ಗೆದ್ದಿದ್ದಾರೆ. ಮೂರನೇ ಟಾಸ್ಕ್ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಕಾದುನೋಡಬೇಕು. ಅದಕ್ಕೂ ಮುನ್ನ ಯಾರು ಟಾಸ್ಕ್ ಆಡಬೇಕು ಎನ್ನುವ ವಿಚಾರಕ್ಕೆ ಪೈಪೋಟಿ ಏರ್ಪಟ್ಟಿದೆ.

ಸ್ಯಾಂಡಿ ಹಾಗೂ ಆಸಿಯಾ ಇಬ್ಬರೂ ನಾನು ಹಿಂದಿನ ಟಾಸ್ಕ್ ಆಡಿಲ್ಲ. ಹಾಗಾಗಿ ನಾನೇ ಮೂರನೇ ಟಾಸ್ಕ್ ಆಡ್ತೀನಿ ಎಂದು ಪಟ್ಟು ಹಿಡಿದಿದ್ದಾರೆ. ಒಂದು ಹಂತಕ್ಕೆ ಆಸಿಯಾ ಭಾವುಕರಾಗಿದ್ದಾರೆ. ಸೌಂದರ್ಯ ಶೆಟ್ಟಿ ಶೋ ಆರಂಭದಿಂದಲೂ ಸೈಲೆಂಟ್ ಆಗಿಯೇ ಇದ್ದಾರೆ. ಕ್ಯಾಮರಾ ಅವರ ಕಡೆ ಪ್ಯಾನ್ ಆಗಿದ್ದೇ ಕಮ್ಮಿ. ಹಾಗಾಗಿ ಮೂರನೇ ಟಾಸ್ಕ್ ಆಡಿ ಎಲ್ಲರ ಗಮನ ಸೆಳೆಯಬೇಕು ಎಂದು ಕಾಯುತ್ತಿದ್ದಾರೆ. ಅದೇ ಕಾರಣಕ್ಕೆ ನನಗೆ ಟಾಸ್ಕ್ ಕೊಡಿ ಬಿಗ್‌ಬಾಸ್ ಎಂದು ವಿಮಾನದೊಳಗಿನ ಕ್ಯಾಮರಾ ಮುಂದೆ ಬಂದು ಗೋಳಿಟ್ಟಿದ್ದಾರೆ.

ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ; ಗೆಲ್ಲೋದು? ಎಂದು ಕ್ಯಾಪ್ಷನ್ ಕೊಟ್ಟು ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೊ ಹರಿಬಿಟ್ಟಿದೆ. ಸ್ಯಾಂಡಿ ಈಸ್ ಬ್ಯಾಕ್.. ಸ್ಯಾಂಡಿ ಶೋ ಗೆಲ್ಲೋದು ಪಕ್ಕಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.