ಬಿಗ್‌ಬಾಸ್ ಕನ್ನಡ ಒಂದು ವಾರ ಪೂರೈಸಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಪ್ರಥಮಾ ಪ್ರಸಾದ್ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಖ್ಯಾತ ನಟಿ ವಿನಯ ಪ್ರಸಾದ್ ಮಗಳು ಪ್ರಥಮಾ ನಟಿಯಾಗಿ, ನೃತ್ಯ ಕಲಾವಿದೆಯಾಗಿ ಗುರ್ತಿಸಿಕೊಂಡವರು. ಈ ಬಾರಿ ದೊಡ್ಮನೆ ಒಳಗೆ ಹೋಗುವ ಅವಕಾಶ ಸಿಕ್ಕಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇನ್ನು ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿರುವ ಪ್ರಥಮಾ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡಿ ಮಾತನಾಡಿದ್ದಾರೆ. ನೆಗೆಟಿವ್ ಆಗಿ ಟ್ರೋಲ್ ಮಾಡಿದವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ.. ಹೌದು ಬಿಗ್‌ಬಾಸ್ ಮನೆಯಿಂಧ ಮೊದಲ ವಾರವೇ ಎಲಿಮಿನೇಟ್ ಆಗಿ ಹೊರ ಬಂದಿದ್ದೀನಿ. ಇದು ನನ್ನ ಸೋಲು ಅಲ್ಲ.. ಒಂದು ವಾರದಲ್ಲಿ ನಾನು ನನ್ನ ಬೆಸ್ಟ್ ಪರ್ಫಾರ್ಮನ್ಸ್ ಕೊಡುವ ಪ್ರಯತ್ನ ಮಾಡಿದ್ದೀನಿ.. ನಿಮ್ಮೆಲ್ಲರ ಪ್ರೀತಿ, ಬೆಂಬಲ ಇನ್ನು ಹೆಚ್ಚಾಗಿದೆ ಎಂದು ನಂಬಿದ್ದೀನಿ.. ವೋಟ್ ಮಾಡಿ ನನ್ನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೀರಾ ಅದಕ್ಕೆ ಧನ್ಯವಾದ" ಎಂದು ತಿಳಿಸಿದ್ದಾರೆ.
ಸಾಕಷ್ಟು ಜನ ವೋಟ್ ಮಾಡಿಲ್ಲ.. ವಿರೋಧಿಸಿದ್ದಾರೆ. ಅದು ನಿಮ್ಮಿಷ್ಟ.. ನಾನು ಅದಕ್ಕೆ ಏನು ಹೇಳಲ್ಲ. ಆದರೆ ತುಂಬಾ ಕೆಟ್ಟದಾಗಿ ನೋವಾಗುವಂತಹ ಪದ ಬಳಸಿ ವೀಡಿಯೋ ಮಾಡಿದ್ದೀರ.. ಅದರಿಂದ ನಿಮ್ಮ ಮನೆ ನಡೀತಿದೆ ಅಂದ್ರೆ ಸಂತೋಷ ಒಳ್ಳೆದಾಗ್ಲಿ ಎಂದು ಪ್ರಥಮಾ ಪ್ರಸಾದ್ ಹೇಳಿದ್ದಾರೆ.
ಈ ಬಾರಿ ವಿಮಾನದ ಸೆಟ್ ಕಾನ್ಸೆಪ್ಟ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ ಆರಂಭವಾಗಿತ್ತು. ಸ್ಪರ್ಧಿಗಳು ಕೆಲವರು ವಾರವಿಡೀ ವಿಮಾನದ ಸೆಟ್‌ನಲ್ಲೇ ಉಳಿಯುವಂತಾಯಿತು. ವಾರದ ಕೊನೆಗೆ ಎಲ್ಲರಿಗೂ ಮನೆ ಒಳಗೆ ಹೋಗುವ ಅವಕಾಶ ಸಿಕ್ಕರೆ ಪ್ರಥಮಾ ಮಾತ್ರ ಶೋನಿಂದ ಹೊರ ಬರುವಂತಾಗಿದೆ.