ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತೆ ಮತ್ತೆ ಹಿನ್ನಡೆ ಆಗುತ್ತಲೇ ಇದೆ. ಪ್ರದೋಷ್ ಮಾಫಿ ಸಾಕ್ಷಿ ಆಗುವುದನ್ನು ತಡೆಯಲು ದರ್ಶನ್ ನಾನಾ ಕಸರತ್ತು ನಡೆಸಿದ್ದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಕೂಡ ವಜಾ ಆಗಿದೆ. ದರ್ಶನ್ ಪರ ಪತ್ನಿ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಬಳಿಕ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ರು. ಸೆಪ್ಟೆಂಬರ್ 24ರಂದು ಅದು ಸಹ ವಜಾ ಆಗಿತ್ತು. ಹಾಗಾಗಿ ಅಂತಿಮವಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಪ್ರದೋಷ್ ಸಾಕ್ಷಿಯನ್ನು ಪರಿಗಣಿಸದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ವಿಜಯಲಕ್ಷ್ಮಿ ಮನವಿ ಮಾಡಿದ್ದರು.

ವಿಜಯಲಕ್ಷ್ಮಿ ದರ್ಶನ್ ಅವರ ಪರ ನಾಗಮುತ್ತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು. ಆದರೆ ಅದಕ್ಕೆ ನ್ಯಾಯಾಧೀಶರು ಹೆಚ್ಚಿನ ಮಹತ್ವ ನೀಡಲಿಲ್ಲ. ಹೈಕೋರ್ಟ್ ಆದೇಶವನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು. ಈಗಾಗಲೇ ಪ್ರದೋಷ್ ಹೇಳಿಕೆಯನ್ನು 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ದರ್ಶನ್ ಪರ ಆದೇಶ ನೀಡಿದ್ದರೆ ಪ್ರದೋಷ್ ಹೇಳಿಕೆಗೆ ಸಮಸ್ಯೆ ಆಗ್ತಿತ್ತು. ಆದರೆ ಈಗ ಅದು ನಿವಾರಣೆ ಆದಂತಾಗಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ಎರಡು ವರ್ಷಗಳ ಬಳಿಕ ಮಾಫಿ ಸಾಕ್ಷಿ ಆಗಿ ಶಾಕ್ ಕೊಟ್ಟಿದ್ದರು. ಈಗ ಆರೋಪಿ ಬದಲು ಪ್ರಕರಣದಲ್ಲಿ 28ನೇ ಸಾಕ್ಷಿಯಾಗಿ ಪ್ರದೋಷ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಂದು ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದ ಕ್ರೌರ್ಯವನ್ನು ನ್ಯಾಯಾಲಯದ ಮುಂದೆ ಪ್ರದೋಷ್ ಬಿಚ್ಚಿಟ್ಟಿದ್ದಾರೆ. ಮುಂದೆ ವಿಚಾರಣೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆಯಲಿದೆ. ಆರೋಪಿಗಳ ಪರ ವಕೀಲರು ಕೂಡ ಪ್ರದೋಷ್‌ಗೆ ಪಾಟಿ ಸವಾಲು ಹಾಕಲಿದ್ದಾರೆ.