ಮಲಯಾಳಂನಲ್ಲಿ ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳ ಬರ್ತಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೀತಿವೆ. ಒಂದು ಸಿನಿಮಾ ದಾಖಲೆಯನ್ನು ಮತ್ತೊಂದು ಸಿನಿಮಾ ಬಹಳ ಬೇಗ ಮುರಿದು ಹಾಕ್ತಿದೆ. ಪ್ಯಾನ್ ಇಂಡಿಯಾ ಟ್ಯಾಗ್ ಇಲ್ಲದೇ ಬಂದು ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿವೆ. 'ಬೆತ್ಲೆಹೇಮ್ ಕುಡುಂಬ ಯೂನಿಟ್' ಸಿನಿಮಾ ಕೂಡ ಅದೇ ರೀತಿ ಸದ್ದು ಮಾಡಿತ್ತು.

ನಿವಿನ್ ಪೌಲಿ, ಮಮಿತಾ ಬೈಜು ನಟನೆಯ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಬೆತ್ಲೆಹೇಮ್ ಕುಡುಂಬ ಯೂನಿಟ್' ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆಗಸ್ಟ್ 21ರಂದು ತೆರೆಗೆ ಬಂದಿದ್ದ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಯಶ್ ನಟನೆಯ 'ಟಾಕ್ಸಿಕ್', ರವಿತೇಜಾ ನಟನೆಯ 'ಇರುಮುಡಿ' ಚಿತ್ರಗಳ ಆರ್ಭಟದ ನಡುವೆಯೂ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು.

ಕೇವಲ 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಬೆತ್ಲೆಹೇಮ್ ಕುಡುಂಬ ಯೂನಿಟ್' ಸಿನಿಮಾ ಬಂಗಾರದ ಬೆಳೆ ತೆಗೆದಿತ್ತು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಕನ್ಫರ್ಮ್ ಆಗಿದೆ. ಅಕ್ಟೋಬರ್ 2ರಂದು ಸಿನಿಮಾ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಬಿಡುಗಡೆಯಾದ 40 ದಿನಕ್ಕೆ ಸಿನಿಮಾ ಓಟಿಟಿಯಲ್ಲಿ ಸಿಗ್ತಿದೆ. ಮಲಯಾಳಂ ಜೊತೆಗೆ ಕನ್ನಡ ಸೇರಿ 5 ಭಾಷೆಗಳಲ್ಲಿ ಓಟಿಟಿ ಚಂದಾದಾರರು ಸಿನಿಮಾ ವೀಕ್ಷಿಸಬಹುದು.

ಮಲಯಾಳಂ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಬೆತ್ಲೆಹೇಮ್ ಕುಡುಂಬ ಯೂನಿಟ್' ಮೊದಲ ಸ್ಥಾನಕ್ಕೇರಿದೆ. ಕಳೆದ ವರ್ಷ 'ಲೋಕಾ ಚಾಪ್ಟರ್- 1: ಚಂದ್ರ' ಸಿನಿಮಾ 300 ಕೋಟಿ ರೂ. ಗಳಿಕೆ ಕಂಡು ದಾಖಲೆ ಬರೆದಿತ್ತು. ಅದನ್ನು ಮೀರಿ ಈಗ ನಿವಿನ್ ಪೌಲಿ ಸಿನಿಮಾ 325 ಕೋಟಿ ರೂ. ಕೊಳ್ಳೆ ಹೊಡೆದಿದೆ. ಇಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ ಯಾಕೆ ಹಿಟ್ ಆಯ್ತು. ಸಿನಿಮಾದಲ್ಲಿ ಅಂಥಾದ್ದೇನಿದೆ ಎಂದು ಪರಭಾಷಿಕರು ನೋಡಲು ಕಾಯುತ್ತಿದ್ದಾರೆ.