ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್‌ಬಾಸ್ ಸೀಸನ್ 13 ಸಾಕಷ್ಟು ಅಚ್ಚರಿಗೆ ಕಾರಣವಾಗ್ತಿದೆ. ಬಹಳ ಬೇಗ ಸ್ಪರ್ಧಿಗಳು ಮನೆಯಿಂದ ಹೊರ ಬರ್ತಿದ್ದಾರೆ. ಕೆಲವರು ಎಲಿಮಿನೇಟ್ ಆಗಿ ಹೊರ ಬಂದ್ರೆ ಅನಾರೋಗ್ಯದ ಸಮಸ್ಯೆಯಿಂದ ಹೊರ ಬರುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ.

ಈಗಾಗಲೇ ನಿರ್ದೇಶಕ ಓಂಪ್ರಕಾಶ್ ರಾವ್ ಆರೋಗ್ಯ ಸಮಸ್ಯೆಯಿಂದ ದೊಡ್ಮನೆ ಬಿಟ್ಟು ಹೊರ ಬಂದಿದ್ದು ಗೊತ್ತೇಯಿದೆ. ಈ ವಾರ ಸಂಗೀತಾ ಭಟ್ ಕೂಡ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಆರೋಗ್ಯ ಸಮಸ್ಯೆ ಅವರನ್ನು ಕಾಡುತ್ತಿದ್ದು ಅನಿವಾರ್ಯವಾಗಿ ಎಲಿಮಿನೇಟ್ ಆಗುವಂತಾಗಿದೆ. ಇನ್ನು ನಾಲಿಗೆ ಹರಿಬಿಟ್ಟು ಬಹಳ ಕ್ರೂರತನ ಮೆರೆದು ಮಾಡ್ರನ್ ಮಹಾಕವಿ ಮಂಜ ಎಲಿಮಿನೇಟ್ ಆಗಿದ್ದಾರೆ. ಮಂಜ ಒಬ್ಬನನ್ನೇ ಮನೆಯಿಂದ ಹೊರಗೆ ಕಳುಹಿಸಿದ್ದು ನನಗೆ ಇಷ್ಟವಾಗಲಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಇನ್ನು ಕುಮಾರಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.

ಮಂಜನ ರೀತಿಯಲ್ಲೇ ಮನೆಯಲ್ಲಿ ಮಿತಿಮೀರಿ ಮಾತನಾಡಿದವರು ಇದ್ದಾರೆ. ನನಗೆ ಅವಕಾಶ ಸಿಕ್ಕಿದ್ದರೆ ಇನ್ನು ಇಬ್ಬರು ಮೂವರನ್ನು ಹೊರಗೆ ಕರೆಸುತ್ತಿದ್ದೆ ಎಂದಿದ್ದಾರೆ. ಮಂಜ ವೇದಿಕೆಗೆ ಬಂದಾಗ ನೀವು ಚೆನ್ನಾಗಿ ಆಟ ಆಡಿದ್ರಿ, ಆದರೆ ನಾಲಗೆ ಮೇಲೆ ಹಿಡಿತ ಇರಬೇಕಿತ್ತು ಅಷ್ಟೆ ಎಂದು ಸುದೀಪ್ ಹೇಳಿದ್ದಾರೆ. ನಾನು ಯಾವ ಪದಗಳನ್ನು ಬಳಸಿದ ಕಾರಣಕ್ಕೆ ಬಿಗ್‌ಬಾಸ್ ಮನೆಯಿಂದ ಹೊರ ಬಂದೆನೋ ಆ ಪದಗಳನ್ನು ನನ್ನ ಜೀವನದಲ್ಲಿ ಮತ್ತೆ ಬಳಸಲ್ಲ ಎಂದು ಮಂಜು ಪ್ರಮಾಣ ಮಾಡಿದ್ದು ಆಯ್ತು.

ಇನ್ನು ಸಂಗೀತಾ ಭಟ್ ವಿಚಾರಕ್ಕೆ ಬರುವುದಾದರೆ ಆಕೆ ಆಂಕ್ಸೈಟಿ ಅಟ್ಯಾಕ್ ಸೇರಿದಂತೆ ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯದಿಂದಾಗಿ ಕಳೆದ ವಾರ ಆಸ್ಪತ್ರೆ ಕೂಡ ಸೇರಿದ್ದರು. ಬಳಿಕ ಮನೆಗೆ ವಾಪಸ್ ಆಗಿದ್ದರೂ ಅಷ್ಟೇನು ಲವಲವಿಕೆಯಿಂದ ಮನೆಯಲ್ಲಿ ಇರಲಿಲ್ಲ.

ಇಬ್ಬರು ಹೀಗೆ ಹೊರ ಬಂದರೆ ಕುಮಾರಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಒಳಗೆ ಹೋಗಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ಅಂತಿಮ ಹಂತದವರಗೆ ಆಕೆ ಬಂದಿದ್ದರು. ಆದರೆ ಆರೋಗ್ಯ ಸಮಸ್ಯೆ ನೆಪವೊಡ್ಡಿ ಆಕೆಯನ್ನು ಆಗ ಮನೆ ಒಳಗೆ ಕಳುಹಿಸಿರಲಿಲ್ಲ. ಆದರೆ ಈಗ ಅಚ್ಚರಿ ಎನ್ನುವಂತೆ ಕುಮಾರಿ ದೊಡ್ಮನೆ ಬಳಗ ಸೇರಿಕೊಂಡಿದ್ದಾರೆ.