ನಾಲ್ಕನೇ ವಾರ ಬಿಗ್‌ಬಾಸ್ ಮನೆಯಿಂದ ಲಿಖಿತ್ ಗೊಂದಿ ಹೊರ ಬಂದಿದ್ದಾರೆ. ಅಗ್ನಿ ಪರೀಕ್ಷೆ ಗೆದ್ದು ಕಾಮಾನ್‌ಮ್ಯಾನ್ ಟ್ಯಾಗ್‌ನಲ್ಲಿ ಅವರು ಮನೆ ಒಳಗೆ ಹೋಗಿದ್ದರು. ಆದರೆ ಸಿಕ್ಕ ಅವಕಾಶ ಬಳಸಿಕೊಳ್ಳದೇ ಹಾಳು ಮಾಡಿಕೊಂಡಿದ್ದಾರೆ. ಎಲಿಮಿನೇಟ್ ಆಗಿ ವೇದಿಕೆಗೆ ಬಂದು ಸ್ವತಃ ಈ ಮಾತನ್ನು ಲಿಖಿತ್ ಹೇಳಿದ್ದಾರೆ.
ಅತಿಯಾದ ಕೋಪ ಅವರನ್ನು ಇಷ್ಟು ಬೇಗ ಮನೆಯಿಂದ ಹೊರ ಬರುವಂತೆ ಮಾಡಿತ್ತು. ಪ್ರಥಮ್ ರೀತಿ ಕೂಗಾಡಿ ಅರಚಾಡಿದರೆ ಗೆದ್ದು ಬಿಡ್ತೀನಿ ಎಂದುಕೊಂಡಿದ್ದರೋ ಏನೋ ಅದು ಸಾಧ್ಯವಾಗಲಿಲ್ಲ. ವೀಕ್ಷಕರಿಗೂ ಲಿಖಿತ್ ಬಗ್ಗೆ ಬೇಸರ ಶುರುವಾಗಿತ್ತು. ಅದು ವೋಟಿಂಗ್‌ನಲ್ಲಿ ಕಂಡುಬಂದಿದೆ. ಸ್ವತಃ ಲಿಖಿತ್ ಕೂಡ ತಾವು ಈ ವಾರ ಎಲಿಮಿನೇಟ್ ಆಗ್ತೀನಿ ಎನ್ನುವುದನ್ನು ಊಹಿಸಿದ್ದರು.
ಧನುಷ್, ಕಿರಣ್, ಮಂಜು, ಸಂಗೀತಾ, ಯಶಸ್ ಹಾಗೂ ಲಿಖಿತ್ ನಾಮಿನೇಟ್ ಆಗಿದ್ದರು. ವೋಟಿಂಗ್ ಆಧರಿಸಿ ಲಿಖಿತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಈ ಬಾರಿ ಎಲಿಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿತ್ತು. ಅದಾಗಲೇ ಯಶಸ್, ಮಂಜು ಹಾಗೂ ಧನುಶ್ ಅವರನ್ನು ಸುದೀಪ್ ಸೇವ್ ಮಾಡಿದ್ದರು. ಕೊನೆಗೆ ಉಳಿದುಕೊಂಡಿದ್ದು ಲಿಖಿತ್, ಸಂಗೀತಾ, ಹಾಗೂ ಶಾಸ್ತ್ರಿ ಮಾತ್ರ. ಕಮಾಂಡೋ ವೇಷಧಾರಿಗಳು ಮನೆ ಒಳಗೆ ಹೋಗಿ ಈ ಮೂವರ ಕಣ್ಣಿಗೆ ಬಟ್ಟೆ ಕಟ್ಟಿ ಹೊರಗೆ ಕರೆದುಕೊಂಡು ಬಂದರು. ಕೆಲ ಸಮಯದ ಬಳಿಕ ಸಂಗೀತಾ ಹಾಗೂ ಶಾಸ್ತ್ರೀ ಮನೆಗೆ ವಾಪಸ್ ಆಗಿದ್ದರು. ಅಲ್ಲಿಗೆ ಲಿಖಿತ್ ಎಲಿಮಿನೇಟ್ ಆಗಿದ್ದು ಖಚಿತವಾಗಿತ್ತು.
ಕಾಮನ್‌ಮ್ಯಾನ್ ಆಗಿ ಮನೆ ಒಳಗೆ ಹೋದವರು ಅತಿಯಾಗಿ ಅಬ್ಬರಿಸುತ್ತಿದ್ದಾರೆ. ಗಮನ ಸೆಳೆಯಲು ಸುಖಾಸುಮ್ಮನೆ ಕಿರುಚಾಡುತ್ತಿದ್ದಾರೆ. ಸೆಲೆಬ್ರೆಟಿಗಳು, ಕಾಮನ್‌ಮ್ಯಾನ್‌ಗಳು ಎನ್ನುವ ಗುಂಪಾಗಿದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದರು. ಆಸಿಯಾ ಜೊತೆಗಿನ ವಾಕ್ಸಮರ ಹಾಗೂ ಪ್ರಶಾಂತ್ ಗೌಡ ಅವರಿಗೆ ಲಿಖಿತ್ 'ಇಡ್ಲಿ-ಮಸಿ' ಎಂದು ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಿಮಯ ಮೀರುವವರು ಮನೆಯಲ್ಲಿ ಇರುವುದು ಬೇಡ ಎಂದು ಸುದೀಪ್ ಹೇಳ್ತಾ ಬಂದಿದ್ದರು. ಅಂತಿಮವಾಗಿ ಲಿಖಿತ್ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ.