ಮಾಡ್ರನ್ ಮಹಾಕವಿ ಮಂಜ ಎಂದೇ ತನ್ನನ್ನು ತಾನು ಕರೆದುಕೊಂಡು ಬಿಗ್ ಬಾಸ್ ಮನೆಯಲ್ಲಿ ಮಂಜುನಾಥ್ ಗಮನ ಸೆಳೆದಿದ್ದು ಗೊತ್ತೇಯಿದೆ. ಆದರೆ ಶೋ ನಿಯಮ ಮೀರಿ ಬಾಯಿಗೆ ಬಂದಂತೆ ಮಾತನಾಡಿ ಅದಕ್ಕೆ ಆತ ಬೆಲೆ ತೆತ್ತಿದ್ದಾನೆ. ಐದು ವಾರಗಳಲ್ಲಿ ಮನೆಯಿಂದ ಹೊರ ಬರುವಂತಾಗಿದೆ. ಮಾತಿನ ಮೇಲೆ ಹಿಡಿತ ಇಲ್ಲ. ಅದೊಂದೇ ನೀವು ಮಾಡಿದ ತಪ್ಪು ಎಂದು ಸುದೀಪ್ ಕೂಡ ಹೇಳಿದ್ದರು.
ಯಾವುದೇ ಕಾರಣಕ್ಕೂ ಇನ್ನುಮುಂದೆ ಈ ತಪ್ಪು ಮಾಡಲ್ಲ. "ಆ ಪದ ಮತ್ತೆ ಬಳಸಲ್ಲ" ಎಂದು ಸುದೀಪ್ ಮುಂದೆ ಮಂಜುನಾಥ್ ಪ್ರಮಾಣ ಮಾಡಿದ್ದರು. "ನಾನು ದೊಡ್ಡ ತಪ್ಪು ಮಾಡಿಬಿಟ್ಟೆ. 10 ವರ್ಷಗಳಿಂದ ಕಂಡ ಕನಸು ಬಿಗ್‌ಬಾಸ್, ಅದನ್ನು ನನ್ನ ಸ್ವಂತ ಕೈಯಿಂದ ಹಾಳು ಮಾಡಿಕೊಂಡು ಬಿಟ್ಟೆ" ಎಂದು ಮಂಜುನಾಥ್ ವೇದಿಕೆಯಲ್ಲಿ ಪಶ್ಚಾತ್ತಾಪಪಟ್ಟಿದ್ದು ಆಯ್ತು. ಆದರೆ ಶೋನಿಂದ ಹೊರ ಬಂದಮೇಲೆ ಮೇಲೆ ಕೂಡ ಮಂಜುಗೆ ತನ್ನ ಮಾತಿನ ಮೇಲೆ ನಿಯಂತ್ರಣ ಇಲ್ಲ ಎಂದು ನಿರ್ದೇಶಕ ನಂದಕಿಶೋರ್ ಹೇಳಿದ್ದಾರೆ.
ಹುಟ್ಟುಹಬ್ಬದ ದಿನವೇ ಮಂಜುನಾಥ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ವಾರದ ಹಿಂದೆ ಲಿಖಿತ್ ಗೊಂದಿ ಕೂಡ ಬಿಗ್‌ಬಾಸ್ ಜರ್ನಿ ಮುಗಿಸಿದ್ದರು. ಮಂಜು ಹೊರ ಬರುತ್ತಿದ್ದಂತೆ ಲಿಖಿತ್ ಭೇಟಿ ಮಾಡಿದ್ದಾರೆ. ರಸ್ತೆಯಲ್ಲಿ ಕೇಕ್ ಕತ್ತರಿಸಿ ಸ್ನೇಹಿತನ ಹುಟ್ಟುಹಬ್ಬವನ್ನು ನಿಖಿತ್ ಆಚರಿಸಿದ್ದಾರೆ. ಈ ವೇಳೆ ಕೂಡ ಮಂಜ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಆ ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಅದಕ್ಕೆ ತರಹೇವಾರಿ ಕಾಮೆಂಟ್ ಬಂದಿದೆ. ನಿರ್ದೇಶಕ ನಂದಕಿಶೋರ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ವೀವ್ ಆಗಿ ಇರದ ನಂದಕಿಶೋರ್ ದಿಢೀರನೆ ಲಿಖಿತ್ ಹಾಗೂ ಮಂಜು ವೀಡಿಯೋಗೆ ಕಾಮೆಂಟ್ ಮಾಡಿರುವುದು ಕೆಲವರ ಅಚ್ಚರಿಗೆ ಕಾರಣವಾಗಿದೆ. "ನಿಮ್ಮ ಮಾತಿನ ಮೇಲೆ ಇನ್ನೂ ನಿಮಗೆ ನಿಯಂತ್ರಣವಿಲ್ಲ. ದಯವಿಟ್ಟು ಮಾತನಾಡುವ ಮುನ್ನ ಯೋಚಿಸಿ. ನಿಮ್ಮಲ್ಲಿ ಉತ್ತಮ ಸಾಮರ್ಥ್ಯವಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳಿ ಮತ್ತು ಅದನ್ನು ಮತ್ತೆ ಕಳೆದುಕೊಳ್ಳಬೇಡಿ" ಎಂದು ನಂದ ಕಿಶೋರ್ ಬರೆದಿದ್ದಾರೆ.
ನಾಯಿ ಬಾಲ ಯಾವತ್ತಿದ್ದರೂ ಡೊಂಕೆ ಬಿಡಿ ಸಾರ್ ಎಂದು ಕೆಲವರು ಅದಕ್ಕೆ ರಿಪ್ಲೇ ಮಾಡಿದ್ದಾರೆ. ಅಷ್ಟಕ್ಕೂ ಮಂಜು ಈ ವೀಡಿಯೋದಲ್ಲಿ ಏನು ತಪ್ಪು ಮಾತನಾಡಿದ್ದಾನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಪ್ರಾಸಬದ್ಧವಾಗಿ ಮಾತನಾಡುತ್ತ, ಅರ್ಧ ತಲೆ ಬೋಳಿಸಿಕೊಂಡು ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರರ ಗಮನ ಸೆಳೆದು ಮಂಜು ಬಿಗ್‌ಬಾಸ್ ಮನೆ ಒಳಗೆ ಹೋಗುವ ಅವಕಾಶ ಪಡೆದಿದ್ದರು. ವಿಜಯನಗರ ಮೂಲದ ಮಂಜುನಾಥ್ ಕಾಮನ್ ಮ್ಯಾನ್ ಟ್ಯಾಗ್‌ನಲ್ಲಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ತಮ್ಮ ಅತಿಯಾದ ಆರ್ಭಟದಿಂದಲೇ ಶೋ ಗೆಲ್ಲುವ ಲೆಕ್ಕಾಚಾರ ಮಾತ್ರ ನಿಜ ಆಗಲಿಲ್ಲ.
Director nandakishore on likith post
— Srinidhi Kiccha (@srinidhi92) October 12, 2026
ವಿಡಿಯೋ ಅಲ್ಲಿ ಅಂತದ್ದು ಏನು ಕೆಟ್ಟದಾಗಿ ಮಾತಾಡಿದ್ದ ಅಂತ ಈ ತರ cmnt ಮಾಡಿದ್ದಾರೆ #BBK13 pic.twitter.com/6dw4AeeOk1