ಚಿತ್ರ: ಬೇಲ್

ನಿರ್ದೇಶನ: ಪವನ್ ಒಡೆಯರ್

ಕಲಾವಿದರು: ಶಿವರಾಜ್‌ಕುಮಾರ್, ಸಾಯಿಕುಮಾರ್, ಯೋಗಿ, ಸಂಜನಾ ಆನಂದ್ ಮುಂತಾದವರು.

ಸಂಗೀತ: ಅಜನೀಶ್ ಲೋಕನಾಥ್

ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್

ಶಿವರಾಜ್‌ಕುಮಾರ್ ಹಾಗೂ ಪವನ್ ಒಡೆಯರ್ ಕ್ರೇಜಿ ಕಾಂಬಿನೇಷನ್ 'ಬೇಲ್' ಸಿನಿಮಾ ತೆರೆಕಂಡು ಪ್ರೇಕ್ಷಕರನ್ನು ರಂಜಿಸ್ತಿದೆ. ಟ್ರೈಲರ್, ಸಾಂಗ್ಸ್ ಅಂತ ಇಷ್ಟು ದಿನ ಸದ್ದು ಮಾಡಿದ ಸಿನಿಮಾ ಈಗ ತೆರೆಗಪ್ಪಳಿಸಿದೆ. ಶಿವಣ್ಣ ನಿವೃತ್ತ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸ್ತಿದ್ದಾರೆ ಎಂದಾಗಲೇ ಕುತೂಹಲ ಮೂಡಿತ್ತು. ಈಗ ಅದಕ್ಕೆ ತೆರೆ ಬಿದ್ದಿದೆ.

ಸೆಂಚುರಿ ಸ್ಟಾರ್ ಜೊತೆ ಸಾಯಿ ಕುಮಾರ್, ಜಯರಾಂ ಹಾಗೂ ಲೂಸ್ ಮಾದ ಯೋಗಿ ಹೀಗೆ ದೊಡ್ಡ ತಾರಾಗಣವೇ 'ಬೇಲ್' ಚಿತ್ರದಲ್ಲಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಪವನ್ ಒಡೆಯರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟಕ್ಕೂ ಕಥೆ ಏನು ? ಸಿನಿಮಾ ಹೇಗಿದೆ ? ಮುಂದೆ ಓದಿ.

ಚಿತ್ರದ ಕಥೆ

ನಿವೃತ್ತ ಪೊಲೀಸ್ ಆಫೀಸರ್ ವಿಜಯ್(ಶಿವರಾಜ್‌ಕುಮಾರ್).. ವೃತ್ತಿಯಲ್ಲಿ ಇದ್ದಾಗ ಅಮ್ಮಾವ್ರ ಗಂಡ ಎಂದೇ ಕರೆಸಿಕೊಂಡು ಒಬ್ಬ ಅಪರಾಧಿಯನ್ನೂ ಹಿಡಿದಿರುವುದಿಲ್ಲ. ಆದರೆ ಬಳಿಕ ಅದೊಂದು ಘಟನೆ ಆತ ಕಾನೂನು ಕೈಗೆತ್ತಿಕೊಳ್ಳುವಂತೆ ಮಾಡಿಬಿಡುತ್ತದೆ. ದೊಡ್ಡ ದೊಡ್ಡ ಅಪರಾಧಿಗಳೇ 'ಬೇಲ್' ತಗೊಂಡು ಹೊರಬಂದು ರಾಜಾರೋಷವಾಗಿ ಸುತ್ತಾಡುವಾಗ ವಾಮಮಾರ್ಗದಲ್ಲಿ ನ್ಯಾಯ ಎತ್ತಿ ಹಿಡಿಯಲು ಮುಂದಾಗುತ್ತಾನೆ. ಆತನಿಗೆ ಸ್ನೇಹಿತರಾದ ನಿವೃತ್ತ ನ್ಯಾಯಾಧೀಶ ಅಲಿ(ಸಾಯಿಕುಮಾರ್) ಹಾಗೂ ನಿವೃತ್ತ ವಿಜ್ಞಾನಿ ರಾಬರ್ಟ್(ಜಯರಾಂ) ಸಾಥ್ ನೀಡುತ್ತಾರೆ. ಮುಂದೆ ಅವರ ಮಿಷನ್ ಏನು ? ಕೊನೆಗೆ ಏನೆಲ್ಲಾ ಆಗುತ್ತೆ ? ಎನ್ನುವುದು ಇನ್ನುಳಿದ ಕಥೆ.

ಸಿನಿಮಾ ಹೇಗಿದೆ ?

ಕಾನೂನಿನಲ್ಲಿರುವ ಲೋಪಗಳಿಂದ ದುಷ್ಟರು ಅನುಕೂಲ ಪಡೆದು ಅಟ್ಟಹಾಸ ಮೆರೆಯುತ್ತಿದ್ದಾರೆ. ದೊಡ್ಡ ದೊಡ್ಡ ಪ್ರಕರಣಗಳ ಆರೋಪಿಗಳೇ ಬೇಲ್ ಪಡೆದು ಹೊರ ಬರುತ್ತಿದ್ದಾರೆ. ಕೆಲವೊಮ್ಮೆ ಅಪರಾಧಿ ಎಂದು ಎಲ್ಲರಿಗೂ ಗೊತ್ತಿದ್ದರೂ ಸರಿಯಾದ ಸಾಕ್ಷ್ಯಾಧಾರ ಇಲ್ಲದೇ ಶಿಕ್ಷೆ ಆಗ್ತಿಲ್ಲ. ಬೇಲ್ ಸಿಕ್ತಿದೆ. ಇದೇ ವಿಚಾರದ ಸುತ್ತಾ ಬೇಲ್ ಸಿನಿಮಾ ಕಥೆ ಸಾಗುತ್ತದೆ. ದೊಡ್ಡ ಭಯೋತ್ಪಾದಕ ದಾಳಿಯ ಸೂತ್ರಧಾರನಿಗೆ ಬೇಲ್ ಸಿಗುತ್ತೆ ಅಂದ್ರೆ ಹೇಗೆ ? ಎನ್ನುವ ಪ್ರಶ್ನೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ.

ಆರಂಭದಲ್ಲಿ ವಿಜಯ್ ತನ್ನ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗುತ್ತಾನೆ. ಬಳಿಕ ಇದೇ ರೀತಿ ಸಮಾಜಕ್ಕೆ ಘಾತುಕರಾಗಿರುವವರ ಬೇಟೆಗೆ ಇಳಿಯುತ್ತಾನೆ. ದಿನಕ್ಕೆ ಲಕ್ಷ ಲಕ್ಷ ಬೇಲ್ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗ್ತಿದೆ. ವಿವಿಧ ಪ್ರಕರಣಗಳಲ್ಲಿ ಸಾವಿರಾರು ಜನಕ್ಕೆ ಪ್ರತಿದಿನ ಬೇಲ್ ಸಿಗುತ್ತಲೇ ಇದೆ. ಇಂತಹ ವಿಚಾರದ ಬಗ್ಗೆ ಪವನ್ ಚಿತ್ರದಲ್ಲಿ ಚರ್ಚಿಸಿದ್ದಾರೆ.

ಫಸ್ಟ್ ಹಾಫ್ ಬಹಳ ವೇಗವಾಗಿ ಸಾಗುತ್ತದೆ. ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ಜಬರ್ದಸ್ತ್ ಎಲಿವೇಷನ್ ಸೀನ್ಸ್ ನೋಡಬಹುದು. ಶಿವಣ್ಣ ತಮ್ಮ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಜಯರಾಂ ಕಾಮಿಡಿ ಕೂಡ ಮಜವಾಗಿದೆ. ಅಜನೀಶ್ ಹಿನ್ನೆಲೆ ಸಂಗೀತ ಮತ್ತಷ್ಟು ಬಲ ತುಂಬಿದೆ. ಸೆಕೆಂಡ್ ಹಾಫ್ ಮೊದಲ ಅರ್ಧ ಗಂಟೆ ಕೊಂಚ ನಿರಾಸೆ ಮೂಡಿಸುತ್ತದೆ. ಆದರೆ ಯೋಗಿ ರೆಡ್ಡಿ(ಲೂಸ್ ಮಾದ ಯೋಗಿ) ಎಂಟ್ರಿ ಬಳಿಕ ಸಿನಿಮಾ ಮತ್ತೆ ಟ್ರ್ಯಾಕ್‌ಗೆ ಮರಳುತ್ತದೆ. ಇನ್ನು ಕ್ಲೈಮ್ಯಾಕ್ಸ್ ಕೂಡ ಸೊಗಸಾಗಿದ್ದು ಸೀಕ್ವೆಲ್ ಮಾಡುವ ಸುಳಿವು ಕೊಟ್ಟಿದ್ದಾರೆ.

ಕಲಾವಿದರ ಅಭಿನಯ

ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಇಡೀ ಸಿನಿಮಾ ಶಿವಣ್ಣ ಆವರಿಸಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಹೊಸ ಅವತಾರದಲ್ಲಿ ತೆರೆಮೇಲೆ ಬಂದಿದ್ದಾರೆ. ಎಂದಿನಂತೆ ತಮ್ಮ ನಟನೆ ಮೂಲಕ ಮೋಡಿ ಮಾಡುತ್ತಾರೆ. ಅವರ ಜೊತೆ ಜೊತೆಗೆ ಸಾಗುವ ಸ್ನೇಹಿತರ ಪಾತ್ರಗಳಲ್ಲಿ ಸಾಯಿಕುಮಾರ್, ಜಯರಾಂ ಇಷ್ಟವಾಗ್ತಾರೆ. ಗಂಭೀರ ಸನ್ನಿವೇಶಗಳಲ್ಲಿ ಕೂಡ ಜಯರಾಂ ಕಾಮಿಡಿ ಟೈಮಿಂಗ್ ಇಷ್ಟವಾಗುತ್ತದೆ. ಯೋಗಿ ರಾಕ್ಷಸನಂತೆ ಅಬ್ಬರಿಸಿದ್ದಾರೆ. ಆಂಗ್ಲ ಪತ್ರಿಕೆಯ ಸಂಪಾದಕನ ಪಾತ್ರದಲ್ಲಿ ರಮೇಶ್ ಇಂದಿರಾ, ಮಾಜಿ ಮಂತ್ರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಟೆಕ್ನಿಕಲಿ ಸಿನಿಮಾ

ಸ್ಕ್ರೀನ್‌ಪ್ಲೇ, ಮ್ಯೂಸಿಕ್, ಪ್ರೊಡಕ್ಷನ್ ಹೀಗೆ ಎಲ್ಲಾ ವಿಭಾಗದಲ್ಲಿ 'ಬೇಲ್' ಸಿನಿಮಾ ಶ್ರೀಮಂತವಾಗಿದೆ. ವಿಜಯ್ ತನ್ನ ಹೋರಾಟಕ್ಕೆ ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ತಾನೆ ಎನ್ನುವುದನ್ನು ಸೊಗಸಾಗಿ ತೋರಿಸಿದ್ದಾರೆ.

ಕೊನೆಯದಾಗಿ

ಒಂದಷ್ಟು ಲಾಜಿಕ್‌ಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಸಿನಿಮಾ ಕಂಡಿತ ಇಷ್ಟವಾಗುತ್ತದೆ. ಒಂದೊಳ್ಳೆ ಸಂದೇಶ ಕೂಡ ಚಿತ್ರದಲ್ಲಿದೆ. ಮಾಸ್ ಪ್ರೇಕ್ಷಕರಿಗೆ ಅದರಲ್ಲೂ ಶಿವಣ್ಣನ ಅಭಿಮಾನಿಗಳಿಗೆ ಹಬ್ಬದೂಟ. ಫ್ಯಾಮಿಲಿ ಸಮೇತ ಒಮ್ಮೆ ನೋಡಿ ಎಂಜಾಯ್ ಮಾಡಬಹುದು.

ರೇಟಿಂಗ್: 2.75/5