ಕನ್ನಡ ಸಿನಿಮಾಗಳು ಒಂದರ ಹಿಂದೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತುವೆ. ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಬೆನ್ನಲ್ಲೇ 'ಪ್ರೇಮದ ಊರಲಿ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಅದೇ ಸಾಲಿಗೆ ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ಕೂಡ ಸೇರಿಕೊಂಡಿದೆ.
ಪವನ್ ಒಡೆಯರ್ ನಿರ್ದೇಶನ ಆಕ್ಷನ್ ಥ್ರಿಲ್ಲರ್ 'ಬೇಲ್' ಚಿತ್ರ ಮಾಸ್ ಪ್ರೇಕ್ಷಕರ ಮನಗೆದ್ದಿದೆ. ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಸಾಕಷ್ಟು ಜನ ಮುಗಿಬಿದ್ದಿದ್ದಾರೆ. ಈಗಾಗಲೇ ಚಿತ್ರತಂಡ ರಾಜ್ಯಾದ್ಯಂತ ವಿಜಯಯಾತ್ರೆ ನಡೆಸ್ತಿದೆ. ಮತ್ತೊಮ್ಮೆ ಶಿವಣ್ಣ ತೆರೆಮೇಲೆ ಖದರ್ ತೋರಿಸಿ ಕಮಾಲ್ ಮಾಡಿದ್ದಾರೆ. 'ಪ್ರೇಮದ ಊರಲಿ' ಆರ್ಭಟದ ನಡುವೆ ಕೂಡ 'ಬೇಲ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ.
3 ದಿನದ ಕಲೆಕ್ಷನ್
ಅಡ್ವಾನ್ಸ್ ಬುಕ್ಕಿಂಗ್ ದೊಡ್ಡಮಟ್ಟದಲ್ಲಿ ಆಗದೇ ಇದ್ದರೂ ಶುಕ್ರವಾರ ಮೊದಲ ಶೋಗಳು ಮುಗಿಯುತ್ತಿದ್ದಂತೆ 'ಬೇಲ್' ಸಿನಿಮಾ ಕ್ರೇಜ್ ಹೆಚ್ಚಾಗಿತ್ತು. ಅದಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು, ವಿಮರ್ಶಕರು ಮೆಚ್ಚಿ ಬರೆದರು. ಹಾಗಾಗಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ. ಆದರೆ ಮೂರು ದಿನಕ್ಕೆ 3ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ. ಮೊದಲ ದಿನ 1.34 ಕೋಟಿ ರೂ, 2ನೇ ದಿನ 82 ಲಕ್ಷ ರೂ ಹಾಗೂ 3ನೇ ದಿನ ಚಿತ್ರ 89 ಲಕ್ಷ ರೂ. ಗಳಿಕೆ ಕಂಡಿರುವುದಾಗಿ ವರದಿಯಾಗಿದೆ.
ವಿಜಯಯಾತ್ರೆ
ತುಮಕೂರು, ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಹುಬ್ಬಳ್ಳಿಗೆ ಚಿತ್ರತಂಡ ಭೇಟಿ ನೀಡಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದೆ. ಹೋದ ಕಡೆಯೆಲ್ಲಾ ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿದೆ. ಅಭಿಮಾನಿಗಳ ಪ್ರೀತಿ ಕಂಡು ಶಿವಣ್ಣ ಭಾವುಕರಾಗಿದ್ದಾರೆ.
ರಿಷಬ್ ಟ್ವೀಟ್
ಪ್ರೇಕ್ಷಕರಿಂದ 'ಬೇಲ್' ಚಿತ್ರಕ್ಕೆ ಇಷ್ಟೊಂದು ಪ್ರೀತಿ ಸಿಗುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ಒಂದೇ ಪರದೆಯ ಮೇಲೆ ಮೂವರು ದಿಗ್ಗಜರಾದ ಶಿವಣ್ಣ, ಸಾಯಿಕುಮಾರ್ ಸರ್ ಹಾಗೂ ಜಯರಾಂ ಸರ್ ಅವರನ್ನು - ನೋಡುವುದು ನಿಜಕ್ಕೂ ವಿಶೇಷ. ಎಂತಹ ಅದ್ಭುತ ಸಂಗಮವಿದು. ಕನ್ನಡ ಸಿನಿಮಾಗಳಿಗೆ ನಮ್ಮ ಜನ ತೋರಿಸುವ ಈ ಪ್ರೀತಿ ಮತ್ತು ಬೆಂಬಲ ಯಾವಾಗಲೂ ತುಂಬಾ ವಿಶೇಷ ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.
Very happy to see #Bail getting so much love from the audience.
— Rishab Shetty (@shetty_rishab) October 4, 2026
It's so special to see three legends on one screen, @NimmaShivanna anna, @saikumaractor sir and @LiveJayaram sir. What a wonderful combination!
ಕನ್ನಡ ಸಿನಿಮಾಗಳಿಗೆ ನಮ್ಮ ಜನ ತೋರಿಸುವ ಈ ಪ್ರೀತಿ ಮತ್ತು ಬೆಂಬಲ ಯಾವಾಗಲೂ… pic.twitter.com/CwcJDsDvBC