ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರ ಡಿಸಿಎಂ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಅದಾಗಲೇ ಎರಡು ಮದುವೆಯಾಗಿ ಇಬ್ಬರಿಗೆ ಡಿವೋರ್ಸ್ ನೀಡಿ ಮೂರನೇ ಮದುವೆಯಾಗಿದ್ದ ಪವನ್ ಸದ್ಯ ಮೂರನೇ ಪತ್ನಿಯಿಂದಲೂ ದೂರಾಗುತ್ತಿದ್ದಾರೆ. ಪವನ್ ಕಲ್ಯಾಣ್ ಹಾಗೂ ಅನ್ನಾ ಲೆಜ್ನೆವಾ ಡಿವೋರ್ಸ್ ಪಡೆಯುವುದಾಗಿ ಘೋಷಿಸಿದ್ದಾರೆ.

ಅಧಿಕೃತವಾಗಿ ಮಾಧ್ಯಮ ಹೇಳಿಕೆ ನೀಡಿ ಇಬ್ಬರೂ ದೂರಾಗುವ ವಿಚಾರವನ್ನು ತಿಳಿಸಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಎದುರಾಳಿಗಳಿಗೆ ಟ್ರೋಲ್ ಮಾಡಲು ಮತ್ತೊಂದು ವಿಷಯ ಸಿಕ್ಕಂತಾಗಿದೆ. ಅಂದಹಾಗೆ ಎರಡು ವರ್ಷಗಳ ಹಿಂದೆಯೇ ಪವನ್- ಅನ್ನಾ ಡಿವೋರ್ಸ್ ಬಗ್ಗೆ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಪವನ್ ಗ್ರಹಗತಿ ಪ್ರಕಾರ ಮೂರನೇ ಪತ್ನಿಯಿಂದ ದೂರಾಗಿ ನಾಲ್ಕನೇ ಮದುವೆ ಆಗ್ತಾರೆ ಎಂದಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.

ತೆಲುಗು ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ವೇಣುಸ್ವಾಮಿ ಜನಪ್ರಿಯತೆ ಸಾಧಿಸಿದ್ದಾರೆ. ಕೆಲವರು ವೇಣುಸ್ವಾಮಿಯಿಂದ ಪೂಜೆ ಮಾಡಿಸಿ ಯಶಸ್ಸು ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ. ಮಾಜಿ ಸಚಿವ ಹೆಚ್. ಡಿ ರೇವಣ್ಣ ಕುಟುಂಬ ಸಮೇತರಾಗಿ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದು ಸುದ್ದಿಯಾಗಿತ್ತು. ರಶ್ಮಿಕಾ ಮಂದಣ್ಣ ಹಾಗೂ ನಿಶ್ವಿಕಾ ನಾಯ್ಡು ಸೇರಿ ಕೆಲ ಕನ್ನಡ ಸಿನಿಮಾ ನಟಿಯರು ಕೂಡ ಚಿತ್ರರಂಗದಲ್ಲಿ ಯಶಸ್ಸು ಸಿಗಬೇಕು ಎಂದು ವೇಣುಸ್ವಾಮಿ ಬಳಿ ಪೂಜೆ ಮಾಡಿಸಿದ್ದರು. ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್ ಪಡೆದು ದೂರಾಗುತ್ತಾರೆ ಎಂದು ಮೊದ್ಲೆ ವೇಣುಸ್ವಾಮಿ ಹೇಳಿದ್ದರು. ಅದು ನಿಜವಾದ ಬಳಿಕ ವೇಣುಸ್ವಾಮಿ ಭವಿಷ್ಯದ ಬಗ್ಗೆ ಕೆಲವರಲ್ಲಿ ಆಸಕ್ತಿ ಮೂಡಿತ್ತು.

ಎರಡು ವರ್ಷಗಳ ಹಿಂದೆ Daily Culture ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವೇಣುಸ್ವಾಮಿ ಮಾತನಾಡಿದ್ದರು. "ಪವನ್ ಕಲ್ಯಾಣ್ ಅವರಿಗೆ ಮೂರರಿಂದ ನಾಲ್ಕು ಮದುವೆ ಆಗುತ್ತದೆ. ಇವಾಗ್ಲೆ ಹೇಳ್ತೀನಿ. ಗುರು ನೀಚಸ್ಥಾನದಲ್ಲಿರುವುದನ್ನು ನೋಡಿ ಒಬ್ಬ ವ್ಯಕ್ತಿಗೆ ಎಷ್ಟು ಮದುವೆ ಆಗುತ್ತೆ ಎಂದು ಹೇಳಬಹುದು. ಜಾತಕದಲ್ಲಿರುವುದು ನಾನು ಹೇಳ್ತಿದ್ದೀನಿ. ಚಿರಂಜೀವಿ ಮಗಳು ಶ್ರೀಜ ಜಾತಕ ಕೂಡ ಇದೇ ತರ ಇದೆ. ಆಕೆಗೂ ಮೂರು ನಾಲ್ಕು ಮದುವೆ ಆಗುತ್ತೆ. ಚಿಕ್ಕಪ್ಪ, ಮಗಳು ಇಬ್ಬರದ್ದೂ ಒಂದೇ ರೀತಿಯ ಜಾತಕ.. ಪವನ್ ಕಲ್ಯಾಣ್‌ಗೆ ಈಗ ಮೂರು ಮದುವೆ ಆಗಿದೆ. ಇನ್ನೊಂದು ಬಾಕಿಯಿದೆ" ಎಂದು ವೇಣುಸ್ವಾಮಿ ಹೇಳಿದ್ದರು.

ಅವತ್ತಿಗೆ ವೇಣುಸ್ವಾಮಿ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಪವನ್ ಕಲ್ಯಾಣ್ ಅಭಿಮಾನಿಗಳು ವೇಣುಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದರು. ಇದೀಗ ಅವರ ಭವಿಷ್ಯ ನಿಜವಾಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.