'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರ ಪೋಷಣೆ ಹಾಗೂ ನಾಯಕಿಯನ್ನು ತೋರಿಸಿರುವ ಕ್ಯಾಮರಾ ಆಂಗಲ್‌ಗಳ ಬಗ್ಗೆ ಭಾರೀ ಚರ್ಚೆ ನಡೀತು. ವಿವಾದ ತಾರಕಕ್ಕೇರಿ ನಟಿಯರಾದ ಆಶಿಕಾ ರಂಗನಾಥ್ ಹಾಗೂ ಡಿಂಪಲ್ ಹಯಾತಿ ಸೇರಿ ಕೆಲವರು ಈ ಬಗ್ಗೆ ದನಿ ಎತ್ತಿದ್ದರು. ಇದೀಗ ಆಶಿಕಾ ರಂಗನಾಥ್ ಮಾಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್‌ ವೈರಲ್ ಆಗಿ ಚರ್ಚೆ ಹುಟ್ಟಾಕ್ಕಿದೆ. ಹೇಳೊದೊಂದು ಮಾಡೊದೊಂದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ನಟಿ ಆಶಿಕಾ ರಂಗನಾಥ್ ಸ್ನೇಹಿತರ ಜೊತೆ ಗೋವಾ ಪ್ರವಾಸ ಕೈಗೊಂಡಿದ್ದರು. ಅದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೊಗಳನ್ನು ಆಕೆ ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಿ ಆಶಿಕಾ ತಲೆ ಕಾಣುತ್ತಿಲ್ಲ. ಬರೀ ಆಕೆಯ ದೇಹ, ಅದರಲ್ಲೂ ಕ್ರಾಪ್ ಟೀ-ಶರ್ಟ್‌ನಲ್ಲಿ ಹೊಕ್ಕಳು ಕಾಣಿಸುವ ಫೋಟೊ ಹೈಲೆಟ್ ಆಗಿದೆ. ಈ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ ಟ್ವಿಟರ್‌ನಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ.

ಇದೇ ನೋಡಿ ಆಶಿಕಾ ರಂಗನಾಥ್ ದ್ವಂದ್ವ ನಿಲುವು.. 'ಪೆದ್ದಿ' ಚಿತ್ರದ ಬಿಡುಗಡೆ ವೇಳೆ "ನಟಿಯರನ್ನು ಬೈಯ್ಯಬೇಡಿ.. ಇಂತಹ ವಿಷಯಗಳು ಮಾರಾಟವಾಗುತ್ತೆ ಎಂದು ಭಾವಿಸುವ ವ್ಯವಸ್ಥೆ ಮತ್ತು ಫಿಲ್ಮ್ ಮೇಕರ್ಸ್ ಅನ್ನು ದೂಷಿಸಿದ್ದರು.. ಆದ್ರೆ ಈಗ ಯಾಕೆ ಆಶಿಕಾ ಇಂತಹ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಅದರಲ್ಲೂ ಮುಖ ಕಾಣದಂತೆ ಎಡಿಟ್ ಮಾಡಿ ಈ ಫೋಟೊ ಹಾಕಿದ್ಯಾಕೆ? ಎಂದು Rangasthalam ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಆಶಿಕಾ ರಂಗನಾಥ್ ಸಹ ಪ್ರತಿಕ್ರಿಯಿಸಿದ್ದಾರೆ.

ಆಶಿಕಾ ರಂಗನಾಥ್ ರಿಪ್ಲೇ ಮಾಡಿ "ಈ ಫೋಟೊದಿಂದ ನಿಮಗೆ ಮುಜುಗರವಾಗಿದ್ದರೆ ಕ್ಷಮಿಸಿ. ನನ್ನ ಮುಖವನ್ನು ಮರೆಮಾಚಲು ಎಡಿಟ್ ಮಾಡಿಲ್ಲ. ಆ ಫ್ರೇಮ್‌ನಲ್ಲಿ ನಮಗೆ ಆಕರ್ಷಕವಾಗಿ ಕಂಡ ಆ ಪುಟ್ಟ ಕ್ಯಾಮೆರಾ ಹಾಗೂ ಲೇಸ್ ಬೆಲ್ಟ್‌ನ ಸೌಂದರ್ಯವನ್ನು ತೋರಿಸಲು ಹಾಗೆ ಫೋಟೊ ಕ್ಲಿಕ್ ಮಾಡಿದ್ದು. ದೇಹದ ಯಾವುದೇ ನಿರ್ದಿಷ್ಟ ಭಾಗದ ಮೇಲೆ ಫೋಕಸ್ ಅಥವಾ ಜೂಮ್ ಮಾಡಿರಲಿಲ್ಲ. ಅಷ್ಟೇ ಅಲ್ಲ, ಇಂತಾದೊಂದು ವಿಚಾರಕ್ಕೆ ನನ್ನ ಎಳೆದು ತರಬೇಡಿ" ಎಂದಿದ್ದಾರೆ.

ಸಿನಿಮಾಗಳಲ್ಲಿ ನಟಿಯರಿಗೆ ನೀಡಲಾಗುವ ಸೀಮಿತ ಅಥವಾ ಅಸಮರ್ಪಕ ಪಾತ್ರಗಳ ಬಗ್ಗೆ ನಾನು ಸಾಮಾನ್ಯವಾಗಿ ಮಾತನಾಡಿದ್ದೆ.. ನಿರ್ದಿಷ್ಟ ಸಿನಿಮಾ ಅಥವಾ ವ್ಯಕ್ತಿಯ ಬಗ್ಗೆ ಅಲ್ಲ. ಮೈಮಾಟ ಪ್ರದರ್ಶನ(skin show) ಬಗ್ಗೆಯಂತೂ ನಾನು ಮಾತನಾಡಲೇ ಇಲ್ಲ ಎಂದು ಆಶಿಕಾ ರಂಗನಾಥ್ ಸ್ಪಷ್ಟನೆ ನೀಡಿದ್ದಾರೆ.