ಬಾಲಿವುಡ್ ಸಲ್ಮಾನ್ ಖಾನ್ ಪ್ರತಿ ವರ್ಷ ಗಣೇಶ ಹಬ್ಬ ಆಚರಿಸಿಸುತ್ತಾರೆ. ಸಹೋದರಿ ಅರ್ಪಿತಾ ಮನೆಯಲ್ಲಿ ನಡೆಯುವ ಪೂಜೆಯಲ್ಲಿ ಭಾಗವಹಿಸುತ್ತಾರೆ. ಈ ವರ್ಷ ಸಲ್ಲು ಗಣೇಶನಿಗೆ ವಿಶೇಷ ಆರತಿ ಬೆಳಗಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಸಖತ್ ವೈರಲ್ ಆಗ್ತಿದೆ. ಸಲ್ಲು ತಪ್ಪಾಗಿ ಆರತಿ ಬೆಳಗುತ್ತಿದ್ದಂತೆ ಅಲ್ಲೇ ಇದ್ದ ಸಹೋದರಿ ಅದನ್ನು ಸರಿಪಡಿಸಿದ್ದಾರೆ.

ಮುಸ್ಲಿಂ ಸಮುದಾಯದವರಾಗಿದ್ದ ಸಲ್ಮಾನ್ ಖಾನ್ ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಪೂಜೆಯಲ್ಲಿ ಭಾಗಿ ಆಗುವುದು ಮಾತ್ರವಲ್ಲ, ಗಣೇಶ ವಿಸರ್ಜನೆ ವೇಳೆ ಕುಣಿದು ಸಂಭ್ರಮಿಸುತ್ತಾರೆ. ಈ ವರ್ಷ ಸಹೋದರ ಸೋಹೈಲ್ ಖಾನ್ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಸಲ್ಲು ಕುಟುಂಬದ ಆಪ್ತರ ಜೊತೆಗೆ ಬಾಲಿವುಡ್ ತಾರೆಯರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಗಣೇಶ ವಿಸರ್ಜನೆ ಪೂಜೆ ವೇಳೆ ಸಲ್ಮಾನ್ ಖಾನ್ ಆರತಿ ಬೆಳಗಿದ್ದಾರೆ.

ಸಲ್ಮಾನ್ ಖಾನ್ ಗಣೇಶನಿಗೆ ವಿರುದ್ಧ ದಿಕ್ಕಿನಲ್ಲಿ ಅಂದರೆ ಅಪ್ರದಕ್ಷಿಣಾಕಾರವಾಗಿ ಆರತಿ ಬೆಳಗಿರುವುದು ವೈರಲ್ ಆಗ್ತಿದೆ. ಅಂದರೆ ಎಡದಿಂದ ಬಲಕ್ಕೆ ಬದಲಾಗಿ ಬಲದಿಂದ ಎಡಕ್ಕೆ ಆರತಿ ಮಾಡಿದ್ದಾರೆ. ಪಕ್ಕದಲ್ಲೇ ಇದ್ದ ಸಹೋದರಿ ಅರ್ಪಿತಾ ಎಡದಿಂದ ಬಲಕ್ಕೆ ಆರತಿ ಮಾಡುವಂತೆ ತಿಳಿಸಿದ್ದು ಕೂಡಲೇ ಸಲ್ಲು ಮತ್ತೊಮ್ಮೆ ಸರಿಯಾಗಿ ಆರತಿ ಮಾಡಿದ್ದಾರೆ. ಸಲ್ಲು ಬಳಿಕ ಆತನ ಗರ್ಲ್‌ಫ್ರೆಂಡ್ ಲುಲಿಯಾ ಕೂಡ ಅದೇ ರೀತಿ ಅಪ್ರದಕ್ಷಿಣಾಕಾರವಾಗಿ ಆರತಿ ಬೆಳಗಿರುವುದನ್ನು ನೋಡಬಹುದು. ಸನಾತನ ಧರ್ಮದ ಪ್ರಕಾರ ವಿರುದ್ಧ ದಿಕ್ಕಿನಲ್ಲಿ ದೇವರಿಗೆ ಆರತಿ ಮಾಡುವುದು ಅಶುಭ ಎಂದೇ ಪರಿಗಣಿಸಲಾಗುತ್ತದೆ.

ದೃಷ್ಟಿ ದೋಷ ನಿವಾರಣೆಗೆ ಆರತಿ ಅಥವಾ ನಿಂಬೆಹಣ್ಣನ್ನು ಎರಡೂ ದಿಕ್ಕಿನಲ್ಲಿ ತಿರುಗಿಸುವ ನಿಯಮವಿದೆ. ಇದೇ ರೀತಿ ಬೇರೆ ಬೇರೆ ಸಂದರ್ಭಗಳಲ್ಲಿ ಅಪ್ರದಕ್ಷಿಣಾಕಾರವಾಗಿ ಆರತಿ ಬೆಳಗಿರುವುದನ್ನು ನೋಡಿದ್ದೇವೆ. ಆದರೆ ದೇವರಿಗೆ ಎಡದಿಂದ ಬಲಕ್ಕೆ ಗಡಿಯಾರದ ಮಳ್ಳು ತಿರುಗುವಂತೆ ಆರತಿ ಬೆಳಗಬೇಕು. ಅಂದಹಾಗೆ ಸಲ್ಮಾನ್ ಖಾನ್ ನಟನೆಯ 'ಮಾತೃಭೂಮಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸಲ್ಲು ಸಿನಿಮಾಗಳಿಗೆ ಮೊದಲಿನ ಕ್ರೇಜ್ ಈಗ ಇಲ್ಲ. ಅವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ.