ಪ್ರೀತಮ್ ಗುಬ್ಬಿ ನಿರ್ದೇಶನದ ಹೊಸ ಸಿನಿಮಾ 'ಮೈ ಬೇಬಿ' ಕುತೂಹಲ ಮೂಡಿಸಿದೆ. ಸದ್ಯ ಚಿತ್ರದ ಮೊದಲ ಸಾಂಗ್ 'ಮಾತು ನೀನೆ' ನವೆಂಬರ್ 11ರಂದು ರಿಲೀಸ್‌ ಆಗಿದೆ. ವಿಶೇಷ ಅಂದ್ರೆ, ಈ ರೊಮ್ಯಾಂಟಿಕ್ ಟ್ರ್ಯಾಕ್ ಅನ್ನು ಸಂಗೀತ ಮಾಂತ್ರಿಕ, ಆಸ್ಕರ್ ವಿನ್ನರ್ ಎ.ಆರ್. ರೆಹಮಾನ್ ಲಾಂಚ್ ಮಾಡ್ತಿದ್ದಾರೆ.

ಗನನಚುಂಬಿ ಬೆಟ್ಟಗಳು, ಪ್ರಕೃತಿ ಸೌಂದರ್ಯದ ನಡುವೆ ಸಾಗುವ ಈ ಮೆಲೋಡಿ ಟ್ರ್ಯಾಕ್‌ಗೆ ಯಂಗ್ ಮ್ಯೂಸಿಕ್ ಡೈರೆಕ್ಟರ್ ನಕುಲ್ ಅಭ್ಯಂಕರ್ ರಾಗ ಸಂಯೋಜಿಸಿದ್ದಾರೆ. ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡನ್ನು ಜಸ್ಕಿರಣ್ ಸಿಂಗ್ ಹಾಡಿದ್ದಾರೆ. ಹಾಡಿನಲ್ಲಿ ಸುಮುಖ್ ಮತ್ತು ಇಶಾ ಲಂಕೇಶ್ ಕೆಮಿಸ್ಟ್ರಿ ಸಖತ್ ಕ್ಯೂಟ್ ಆಗಿ ಮೂಡಿಬಂದಿದೆ. ಬೈಕ್ ಏರಿ ಸುಂದರ ತಾಣಗಳಿಗೆ ಪ್ರವಾಸ ಹೊರಟ ಜೋಡಿ ಜರ್ನಿಯನ್ನು ಸಿನಿಮಾಟೋಗ್ರಾಫರ್ ಅಭಿಲಾಷ್ ಕಳತ್ತಿ ತಮ್ಮ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ.

'ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್' ಅಡಿಯಲ್ಲಿ ರಂಗನಾಥ್ ಕೆಂಪನಹಳ್ಳಿ (ಆರ್.ಕೆ) 'ಮೈ ಬೇಬಿ' ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಎಡಿಟಿಂಗ್ ಚಿತ್ರಕ್ಕಿದೆ. ಮೊದಲ ಹಾಡಿನಿಂದಲೇ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಹಿಮಾಚಲ್ ಪ್ರದೇಶ ಹಾಗೂ ಮನಾಲಿ ಸುತ್ತಾಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಬೆಂಗಳೂರಿನಲ್ಲಿ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಸದ್ಯ 'ರಾಮಾಯಣ' ಚಿತ್ರದ ಸಂಗೀತದಿಂದ ಎ. ಆರ್ ರಹಮಾನ್ ಸದ್ದು ಮಾಡ್ತಿದ್ದಾರೆ. ಅವರು 'ಮಾತು ನೀನೆ' ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಿರುವುದು ತಂಡದ ಸಂತಸಕ್ಕೆ ಕಾರಣವಾಗಿದೆ. 'ಮೈ ಬೇಬಿ' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.