ಸದ್ಯ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಸ್ಟಾರ್ ನಟರು ಬಹುಕೋಟಿ ವೆಚ್ಚ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿ ಎರಡ್ಮೂರು ವರ್ಷ ವ್ಯಯಿಸುತ್ತಿದ್ದಾರೆ. ಹಾಗಂತ ಮಾಡಿದ ಸಿನಿಮಾಗಳೆಲ್ಲಾ ಗೆಲ್ತಿಲ್ಲ. ಭಾರೀ ನಿರೀಕ್ಷೆ ಹುಟ್ಟಿಸಿದ ಸಿನಿಮಾಗಳು ಸೋಲ್ತಿವೆ. ದೊಡ್ಡ ಸ್ಕೇಲ್‌ನಲ್ಲಿ ಸಿನಿಮಾ ಮಾಡಿದ ತಕ್ಷಣ ಗೆಲ್ಲುತ್ತದೆ ಎನ್ನುವ ಗ್ಯಾರಂಟಿ ಇಲ್ಲ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.
ಕಿಚ್ಚ ಸುದೀಪ್ ಜೊತೆ 'ಬಿಲ್ಲ ರಂಗ ಬಾಷ' ಚಿತ್ರಕ್ಕೆ ಅನೂಪ್ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ 'ವಿಕ್ರಾಂತ್ ರೋಣ' ರೀತಿಯ ಬಿಗ್ ಬಜೆಟ್ ಸಿನಿಮಾ ಮಾಡಿತ್ತು. ಆ ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಇದೀಗ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ನಡೀತಿದೆ. ಪ್ರೈಂಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಾಗ್ತಿದೆ. ಇತ್ತೀಚೆಗೆ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಪೋಸ್ಟರ್ ಬಂದು ಗಮನ ಸೆಳೆದಿತ್ತು.
ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಸಿನಿಮಾ ಯಾವುದೇ ನಿರೀಕ್ಷೆ ಇಲ್ಲದೇ ಬಂದು ಗೆದ್ದಿತ್ತು. 'ಬಾಹುಬಲಿ- 1' ಎದುರು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಬಳಿಕ ಅವರ ನಿರ್ದೇಶನದಲ್ಲಿ ಬಂದಿದ್ದ 'ರಾಜರಥ' ಸಿನಿಮಾ ಸೋತಿತ್ತು. 'ವಿಕ್ರಾಂತ್ ರೋಣ' ಕೂಡ ಕರ್ನಾಟಕ ಬಿಟ್ಟು ಬೇರೆ ಕಡೆ ಸದ್ದು ಮಾಡಿರಲಿಲ್ಲ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅನೂಪ್ ಮಾತನಾಡಿದ್ದಾರೆ. ಸ್ಕೇಲ್‌ಗಿಂತ ಸಿನಿಮಾ ಕಂಟೆಂಟ್ ಮುಖ್ಯ ಎಂದಿದ್ದಾರೆ.
'ಬಿಲ್ಲ ರಂಗ ಬಾಷ' ಚಿತ್ರಕ್ಕೆ ಆರಂಭದಲ್ಲಿ ಒಂದಷ್ಟು ಸಮಸ್ಯೆ ಎದುರಾಗಿತ್ತು. ಸುದೀಪ್ ಸರ್ ಜವಾಬ್ದಾರಿ ತಗೊಂಡು ಅದನ್ನು ನಿಭಾಯಿಸಿದ್ದರು. ಈಗ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಅಂದುಕೊಂಡ ಸಮಯಕ್ಕೆ ಪ್ರೇಕ್ಷಕರ ಮುಂದೆ ಬರ್ತೀವಿ ಎಂದು ಅನೂಪ್ ಮಾಹಿತಿ ನೀಡಿದ್ದಾರೆ. 'ರಂಗಿತರಂಗ' ಚಿಕ್ಕ ಸಿನಿಮಾ ಆಗಿದ್ದರೂ 'ಕಾಂತಾರ' ರೀತಿ ದೇಶಾದ್ಯಂತ ಸದ್ದು ಮಾಡಿತ್ತು. ಬರೀ ಸ್ಕೇಲ್ ಸಿನಿಮಾ ಗೆಲ್ಲಲು ಕಾರಣ ಎನ್ನುವುದು ಕಷ್ಟ ಎಂದಿದ್ದಾರೆ.
ಕಂಟೆಂಟ್ ಮುಖ್ಯ.. ಸ್ಟಾರ್ ನಟರು ಇದ್ದಾಗ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಬಹುದು, ಆದರೆ ಸಿನಿಮಾ ಐದಾರು ವಾರ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತದೆ. ಕಥೆ ವರ್ಕ್ ಆಗದೇ ಇದ್ದರೆ ಸ್ಕೇಲ್ ಚಿತ್ರವನ್ನು ಉಳಿಸುವುದಿಲ್ಲ. ಒಂದು ಚಿತ್ರಕ್ಕೆ ಎಷ್ಟು ಸಮಯ ಬೇಕೋ ಅಷ್ಟು ಸಮಯ ತೆಗೆದುಕೊಂಡು ಮಾಡ್ತೀನಿ. ಹೊಸದನ್ನು ಮಾಡಲು ಸಮಯಾವಕಾಶ ಬೇಕು ಎಂದು ಅನೂಪ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ. ಭಾರೀ ಬಜೆಟ್ ಸಿನಿಮಾಗಳ ಬಗ್ಗೆ ಮತ್ತಷ್ಟ ಮಾಹಿತಿ ಹಂಚಿಕೊಂಡಿದ್ದಾರೆ.