ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಮದುವೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಮದುವೆ ತಯಾರಿ ನಡೀತಿದೆ. ಒಂದೊಂದೇ ಶಾಸ್ತ್ರಗಳು ಶುರುವಾಗಿದೆ. ಗ್ರೀಸ್ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ. ಬಳಿಕ ಚೆನ್ನೈನಲ್ಲಿ ಅದ್ಧೂರಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ. ಈಗಾಗಲೇ ಅದಕ್ಕಾಗಿ ಗಣ್ಯಾತಿಗಣ್ಯರಿಗೆ ಆಮಂತ್ರಣ ನೀಡಲಾಗಿದೆ.
ಅನಿರುದ್ಧ ಮದುವೆ ಸಂಭ್ರಮದ ನಡುವೆ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಶಾರುಖ್ ಖಾನ್ ನಟನೆಯ 'ಕಿಂಗ್' ಚಿತ್ರದಿಂದ ಹೊರಗೆ ಬಂದಿದ್ದಾರೆ. ಕ್ರಿಸ್ಮಸ್ ಸಂಭ್ರಮದಲ್ಲಿ ಡಿಸೆಂಬರ್ 24ಕ್ಕೆ ಸಿನಿಮಾ ತೆರೆಗೆ ಬರಬೇಕಿದೆ. ಮದುವೆ ಹಿನ್ನೆಲೆಯಲ್ಲಿ ಚಿತ್ರಕ್ಕೆ ಕೆಲಸ ಮಾಡಲು ಸಾಧ್ಯವಾಗದೇ ಅನಿರುದ್ಧ್ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಸಚಿನ್-ಜಿಗರ್ ಇದೀಗ 'ಕಿಂಗ್' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ಖಚಿತವಾಗಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಶಾರುಖ್ ಖಾನ್ ಚಿತ್ರವನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ಅಟ್ಲಿ ನಿರ್ದೇಶನದಲ್ಲಿ ಶಾರುಖ್ ನಟಿಸಿದ್ದ 'ಜವಾನ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಅನಿ ಟ್ಯೂನು, ಬಿಜಿಎಂ ಕೂಡ ಸಿನಿಮಾ ಗೆಲುವಿಗೆ ಪ್ಲಸ್ ಆಗಿತ್ತು. ಹಾಗಾಗಿ 'ಕಿಂಗ್' ಚಿತ್ರಕ್ಕೆ ಅನಿರುದ್ಧ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಇದೀಗ ಆ ಜಾಗಕ್ಕೆ ಸಚಿನ್ ಜಿಗರ್ ಬಂದಿದ್ದಾರೆ.
ನವೆಂಬರ್ 2ರಂದು ಕಿಂಗ್ ಖಾನ್ ಹುಟ್ಟುಹಬ್ಬ. ಇದೇ ಸಂಭ್ರಮದಲ್ಲಿ 'ಕಿಂಗ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ಸಂಗೀತ ನಿರ್ದೇಶಕ ಬದಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗ್ತಿದೆ. ಈ ಹಿಂದೆ 'ಕಿಂಗ್' ಚಿತ್ರಕ್ಕಾಗಿ ಅನಿರುದ್ಧ್ ಥೀಮ್ ಮ್ಯೂಸಿಕ್ ಮಾಡಿದ್ದರು. ಅದು ಗಮನ ಸೆಳೆದಿತ್ತು. ಚಿತ್ರದಲ್ಲಿ ಕೂಡ ಅದನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಇನ್ನುಳಿದಂತೆ ಸಾಂಗ್ಸ್ ಹಾಗೂ ಬಿಜಿಎಂ ಜವಾಬ್ದಾರಿ ಸಚಿನ್ ಜಿಗರ್ ಹೆಗಲೇರಿದೆ. ಅನಿ ಮ್ಯೂಸಿಕ್ ಕ್ರೇಜ್ ಹೇಗಿದೆ ಎನ್ನುವುದು ಗೊತ್ತೇಯಿದೆ. ಅವರು 'ಕಿಂಗ್' ಚಿತ್ರದಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
'ಕಿಂಗ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸ್ತಿದ್ದಾರೆ. ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ರಾಣಿ ಮುಖರ್ಜಿ, ಜಾಕಿ ಶ್ರಾಫ್, ಅರ್ಷದ್ ವಾರ್ಸಿ ಮತ್ತು ಅಭಯ್ ವರ್ಮಾ ಕೂಡ ತಾರಾಗಣದಲ್ಲಿದ್ದಾರೆ. ಹಾಡೊಂದರಲ್ಲಿ ಕರೀನಾ ಕಪೂರ್ ಕೂಡ ಹೆಜ್ಜೆ ಹಾಕಿದ್ದಾರೆ ಎನ್ನಲಾಗ್ತಿದೆ. ಇನ್ನು ಆರನೇ ಬಾರಿಗೆ ಶಾರುಖ್ ಹಾಗೂ ದೀಪಿಕಾ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ.