ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಮದುವೆಗೆ ಸಿದ್ಧತೆ ಜೋರಾಗಿದೆ. ನವೆಂಬರ್ 10ರಂದು ಗ್ರೀಸ್ ದೇಶದಲ್ಲಿ ಮದುವೆ ನಡೆಯಲಿದೆ. ರಜನಿಕಾಂತ್ ಸೇರಿ ಕೆಲವೇ ಆಪ್ತರು ಈ ಡೆಸ್ಟಿನೇಷನ್ ವೆಡ್ಡಿಂಗ್ ಭಾಗವಾಗಲಿದ್ದಾರೆ. ಇನ್ನುಳಿದಂತೆ ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದೆ.

ಚೆನ್ನೈನ ITC ಗ್ರ್ಯಾಂಡ್ ಚೋಲಾ ಹೋಟೆಲ್‌ನಲ್ಲಿ ನಡೆಯಲಿರುವ ಅನಿ-ಕಾವ್ಯಾ ರಿಸೆಪ್ಷನ್ ಪಾರ್ಟಿಗೆ ದೇಶದ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ವಿಂಟೇಜ್ ಮಾದರಿಯ ಇನ್ವಿಟೇಷನ್ ಕಾರ್ಡ್ ಅನ್ನು ನೀಡಿ ಮದುವೆಗೆ ಆಮಂತ್ರಣ ನೀಡಿದ್ದಾರೆ. ಆ ಇನ್ವಿಟೇಷನ್ ಒಳಗೆ ಏನೇನಿದೆ ಎನ್ನುವ ವೀಡಿಯೋ ಸಖತ್ ವೈರಲ್ ಆಗ್ತಿದೆ.

'ಪಿಂಕ್ ವಿಸ್ಲ್ ಮ್ಯಾನ್' (Pink Whistle Man) ಸಂಸ್ಥೆಯ ಸ್ಥಾಪಕಿಯಾದ ರಂಜನಿ ಅಯ್ಯಂಗಾರ್ ಈ ವಿಶೇಷ ಆಮಂತ್ರಣ ಪತ್ರಿಕೆ ರೂಪಿಸಿದ್ದಾರೆ. ಪೌಡರ್ ಬ್ಲೂ , ಐವರಿ ಹಾಗೂ ಬೆಳ್ಳಿ ಬಣ್ಣಗಳ ಸಮ್ಮಿಶ್ರಣದ ಪೆಟ್ಟಿಗೆ ರೀತಿ ಅದನ್ನು ವಿನ್ಯಾಸ ಮಾಡಲಾಗಿದೆ. 'ಬರೋಕ್' (Baroque) ಶೈಲಿಯ ಡಿಸೈನ್ ಇದೆ. ಉಬ್ಬು ವಿನ್ಯಾಸದ ಕಾಗದ, ಗತಕಾಲದ ಶೈಲಿಯ ಮುದ್ರೆ ಇರುವಂತೆ ಬಹಳ ಸಿಂಪಲ್ ಹಾಗೂ ಸ್ಪೆಷಲ್ ಆಗಿದೆ.

ರಜನಿಕಾಂತ್ ಚಿತ್ರಗಳಿಗೆ ಅನಿರುದ್ಧ್ ಸಂಗೀತ ನೀಡಿರುವುದು ಮಾತ್ರವಲ್ಲ, ಸೋದರ ಸಂಬಂಧಿ ಕೂಡ. ಹಾಗಾಗಿ ಜೋಡಿ ಮದುವೆಗೆ ತಲೈವಾ ಸಾಕ್ಷಿ ಆಗುತ್ತಾರೆ ಎನ್ನಲಾಗ್ತಿದೆ. ಕಾವ್ಯಾ ಮಾರನ್ ತಂದೆ ಕಲಾನಿಧಿ ಮಾರನ್ ಖ್ಯಾತ ಉದ್ಯಮಿ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಸಿನಿಮಾ ಮಾತ್ರವಲ್ಲದೇ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಈ ಮದುವೆ ಹಾಗೂ ರಿಸೆಪ್ಷನ್‌ಗೆ ಸಾಕ್ಷಿ ಆಗಲಿದ್ದಾರೆ.

ಇತ್ತೀಚೆಗೆ ಅನಿರುದ್ಧ್ ರವಿಚಂದರ್ ಮನೆಯಲ್ಲಿ ನಡೆದ ನವರಾತ್ರಿ ಪೂಜೆಯಲ್ಲಿ ರಜನಿಕಾಂತ್, ಶಿವಕಾರ್ತಿಕೇಯನ್, ಶಾಲಿ ಅಜಿತ್ ಸೇರಿ ಹಲವರು ಭಾಗಿ ಆಗಿದ್ದರು. ಮದುವೆ ಸಮಾರಂಭದಲ್ಲಿ ಕೂಡ ತಾರೆಯರ ಸಮಾಗಮ ಆಗಲಿದೆ. ರಜನಿಕಾಂತ್ ಮಾಜಿ ಅಳಿಯ ಧನುಷ್ ಕೂಡ ರಿಸೆಪ್ಷನ್ ಪಾರ್ಟಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಧನುಷ್ ಹಾಗೂ ಅನಿರುದ್ಧ್ ನಡುವೆ ಆತ್ಮೀಯ ಒಡನಾಟವಿದೆ.