ರಜನಿಕಾಂತ್ ನಟನೆಯ 'ಜೈಲರ್- 2' ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ನ್ಯಾಯ ಸಿಕ್ಕಿದೆ. ಸಣ್ಣ ಸಣ್ಣ ಪಾತ್ರ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಅದರಲ್ಲೂ ಡಾನ್ ರೀತಿ ಬಿಲ್ಡಪ್ ತೆಗೆದುಕೊಳ್ಳುವ ಮೂರ್ತಿ ಪಾತ್ರಧಾರಿ ನಮೋ ನಾರಾಯಣ ಎಲ್ಲರ ಗಮನ ಸೆಳೆದಿದ್ದಾರೆ. ಫಸ್ಟ್ ಹಾಫ್ ರಜನಿಕಾಂತ್ ಹಾಗೂ ನಮೋ ನಾರಾಯಣ ಕಾಂಬಿನೇಷನ್ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಕೊಡುತ್ತದೆ.

ಅಂದಹಾಗೆ 'ಜೈಲರ್' ಚಿತ್ರದಲ್ಲಿ ನಮೋ ನಾರಾಯಣ ಸಣ್ಣ ಪಾತ್ರ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಅವರು ನಟಿಸಿದ್ದ ಸನ್ನಿವೇಶಗಳಿಗೆ ಕತ್ತರಿ ಬಿದ್ದಿತ್ತು. ಆದರೆ ಸೀಕ್ವೆಲ್ ಮಾಡಬೇಕು ಎಂದಾಗ ನೆಲ್ಸನ್ ಒಂದು ಪಾತ್ರವನ್ನು ನಮೋ ನಾರಾಯಣ ಅವರಿಗಾಗಿ ಡಿಸೈನ್ ಮಾಡಿದ್ದರು. ಅದು ವರ್ಕೌಟ್ ಆಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೂರ್ತಿ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಅಂದಹಾಗೆ ನಮೋ ನಾರಾಯಣ ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಬಂದಿದ್ದಾರೆ.

ಬಹ್ರೇನ್, ದುಬೈ, ಮಲೇಷ್ಯಾ ಹಾಗೂ ಅಮೆರಿಕಾದಲ್ಲಿ ನಮೋ ನಾರಾಯಣ ಕೆಲಸ ಮಾಡಿದ್ದಾರೆ. ಆಕಸ್ಮಿಕವಾಗಿ ಅವರು ಚಿತ್ರರಂಗಕ್ಕೆ ಬರುವಂತಾಗಿತ್ತು. ಓದು ಮುಗಿಸಿದ ಬಳಿಕ ಸಿನಿಮಾಗಳಲ್ಲಿ ಕೆಲಸ ಮಾಡುವ ಆಸಕ್ತಿ ಅವರಿಗಿತ್ತು. ಅದಕ್ಕಾಗಿ ಸಹ ನಿರ್ದೇಶಕರಾಗಿ ಪ್ರಯತ್ನಿಸಿದ್ದರು. ಸಿನಿಮಾ ತಂಡವನ್ನು ಸೇರಿಕೊಂಡಿದ್ದರು. ಸಾಫ್ಟ್‌ವೇರ್ ಡೆವಲಪರ್ ಕೆಲಸ ಮಾಡುತ್ತಲೇ ಬಿಡುವಿನ ವೇಳೆ ಸಹ ನಿರ್ದೇಶಕನಾಗಿ ಕೆಲಸ ಮಾಡಲು ಯತ್ನಿಸಿದ್ದರು. ಬಳಿಕ ವಿದೇಶದಲ್ಲಿ ಕೆಲಸ ಸಿಕ್ಕಿತ್ತು.

ಬಹ್ರೇನ್‌ನಲ್ಲಿ ಕೆಲ ದಿನ ಕೆಲಸ ಮಾಡಿ ಬಳಿಕ ಬಿಸಿನೆಸ್ ಕನ್ಸಲ್ಟೆಂಟ್ (ವ್ಯಾಪಾರ ಸಲಹೆಗಾರ) ಆಗಿ ದುಬೈನಲ್ಲಿ ದುಡಿದರು. ಎಲ್ಲಾ ಚೆನ್ನಾಗಿಯೇ ಇತ್ತು. ಆದರೆ ಚಿತ್ರರಂಗದ ವ್ಯಾಮೋಹ ಬಿಟ್ಟು ಹೋಗಲಿಲ್ಲ. ಮಲೇಷಿಯಾದಲ್ಲೂ ಕೆಲಸ ಕಾಲ ಕೆಲಸ ಮಾಡಿದ್ದರು. ಕೊನೆಗೆ ಅಮೆರಿಕಾದ ಕಂಪನಿಯಲ್ಲಿ ಉದ್ಯೋಗ ಸಿಕ್ಕಿ 10 ವರ್ಷಗಳ ಅವಧಿಗೆ ವೀಸಾ ಸಹ ಸಿಕ್ಕಿತ್ತು. ಇನ್ನು ಸಹಾಯಕರಾಗಿ ಕೆಲಸ ಮಾಡುವ ಸಮಯದಲ್ಲಿ ನಿರ್ದೇಶಕ ಸಮುದ್ರಖನಿ ಒಡನಾಟ ಬೆಳೆಸಿಕೊಂಡಿದ್ದರು. ಅವರು 'ನಾಡೋಡಿಗಳ್'(ಕನ್ನಡದಲ್ಲಿ ಹುಡುಗರು)ಚಿತ್ರದಲ್ಲಿ ಚಿತ್ರ ಆರಂಭಿಸಿದಾಗ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸಕ್ಕೆ ಸೇರಿದ್ದೆ ಎಂದು 'ಮನೋಬಾಲಾಸ್ ವೇಸ್ಟ್ ಪೇಪರ್' ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

'ನಾಡೋಡಿಗಳ್' ಚಿತ್ರದಲ್ಲೇ ಚಿನ್ನಮಣಿ ಎಂಬ ಪಾತ್ರದಲ್ಲಿ ನಮೋ ನಾರಾಯಣ ನಟಿಸಿದ್ದರು. ಹೀಗೆ ನಟನೆ ಆರಂಭಿಸಿದರು. ಹೀಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಹಾಗೂ ನಟ ಕೂಡ ಆಗಿಬಿಟ್ಟರು. 'ನಾಡೋಡಿಗಳ್' ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿತ್ತು. ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಮೋಡಿ ಮಾಡಿದರು. ಸೂರ್ಯ ನಟನೆಯ 'ಕರುಪ್ಪು' ಚಿತ್ರದಲ್ಲಿ ಕೂಡ ನಮೋ ನಾರಾಯಣ ಬಣ್ಣ ಹಚ್ಚಿದ್ದರು. ಇದೀಗ 'ಜೈಲರ್'-2 ಚಿತ್ರದಲ್ಲಿ ಜೋಕರ್ ಆಗುವ ಡಾನ್ ರೀತಿಯ ಪಾತ್ರದಲ್ಲಿ ಮಿಂಚಿದ್ದಾರೆ.