ಕಲಾವಿದರು, ತಂತ್ರಜ್ಞರ ಸಂಭಾವನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಸ್ಯ ಕಲಾವಿದರು ಕೂಡ ಕೋಟಿ ಕೋಟಿ ಸಂಭಾವನೆ ಪಡೆಯುವ ಕಾಲ ಇದು. ಕಾರಣ ಅವರಿಗಿರುವ ಡಿಮ್ಯಾಂಡ್. 'ಜೈಲರ್'- 2 ಚಿತ್ರದ ಕಲಾವಿದರು, ತಂತ್ರಜ್ಞರು ಭಾರೀ ಸಂಭಾವನೆ ಪಡೆದಿದ್ದಾರೆ. ಆದರೆ ಕೋಟಿ ಕೋಟಿ ಸಂಭಾವನೆ ಪಡೆದ ನಟನೊಬ್ಬ ತೆರೆಮೇಲೆ ಕಾಣಿಸಿಕೊಳ್ಳಲೇ ಇಲ್ಲ ಅಂದ್ರೆ ಅಚ್ಚರಿ ಆಗದೇ ಇರುವುದಿಲ್ಲ.

ಹೌದು.. ಇತ್ತೀಚೆಗೆ ನಿರ್ದೇಶಕರು ಬರೆದುಕೊಂಡಿದ್ದನ್ನೆಲ್ಲಾ ಶೂಟ್ ಮಾಡಿ ಕೊನೆಗೆ ಎಡಿಟಿಂಗ್ ವೇಳೆ ಬಹುತೇಕ ದೃಶ್ಯಗಳಿಗೆ ಕತ್ತರಿ ಹಾಕುತ್ತಿದ್ದಾರೆ. 'ಜೈಲರ್'- 2 ಚಿತ್ರದಲ್ಲಿ ಮೋಹಲ್ ಲಾಲ್ ನಟನೆಯ ದೃಶ್ಯಗಳಿಗೆ ಕತ್ತರಿ ಬಿದ್ದಿದೆ ಎಂದು ಅಭಿಮಾನಿಗಳು ಬೇಸರಗೊಂಡಿರುವುದು ಗೊತ್ತೇಯಿದೆ. ಮೇಘನಾ ರಾಜ್ ಕೂಡ 35 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಆಗಿದ್ದೆ. ಅದರಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಬಿದ್ದಿದೆ ಎಂದು ಒಪ್ಪಿಕೊಂಡಿದ್ದಾರೆ. ಇದೇ ರೀತಿ ಹಾಸ್ಯ ನಟ ಸಂತಾನಂ ನಟಿಸಿದ್ದ ದೃಶ್ಯಗಳನ್ನು ನಿರ್ದೇಶಕ ನೆಲ್ಸನ್ ತೆಗೆದು ಹಾಕಿದ್ದಾರೆ ಎನ್ನಲಾಗ್ತಿದೆ.

ತಮಿಳಿನ ಬಹುಬೇಡಿಕೆಯ ಹಾಸ್ಯನಟ ಸಂತಾನಂ ಕೂಡ 'ಜೈಲರ್'- 2 ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ ಸಿನಿಮಾ ನೋಡಿದ್ರೆ ಒಂದು ಕ್ಷಣವೂ ಅವರು ಕಾಣುವುದಿಲ್ಲ. 7 ದಿನಗಳ ಕಾಲ ಒಂದಷ್ಟು ಹಾಸ್ಯ ದೃಶ್ಯಗಳಲ್ಲಿ ಸಂತಾನಂ ನಟಿಸಿದ್ದರು. ಸೆಕೆಂಡ್ ಹಾಫ್‌ನಲ್ಲಿ ಆ ದೃಶ್ಯಗಳಿದ್ದವು. ಆದರೆ ಕಾಲಾವಧಿ ಹೆಚ್ಚಾಯ್ತು ಎನ್ನುವ ಕಾರಣಕ್ಕೆ ಅದನ್ನು ತೆಗೆದುಬಿಟ್ಟಿದ್ದಾರೆ ಎನ್ನಲಾಗ್ತಿದೆ. ಚಿತ್ರದ ಫಸ್ಟ್‌ ಹಾಫ್‌ನಲ್ಲಿ ಮೂರ್ತಿ ಹಾಗೂ ಮುತ್ತುವೇಲ್ ನಡುವಿನ ಕಾಮಿಡಿ ಮಜವಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಮತ್ತೆ ಕಾಮಿಡಿ ಬೇಡ ಎಂದು ನೆಲ್ಸನ್ ಈ ನಿರ್ಧಾರಕ್ಕೆ ಬಂದಿರಬಹುದು.

ಚಿತ್ರದಲ್ಲಿ 7 ದಿನ ನಟಿಸೋಕೆ ಸಂತಾನಂ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. ಇನ್ನು ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸೋಕೆ 3 ಕೋಟಿ ರೂ. ಸಂಭಾವನೆ ಜೇಬಿಗಿಳಿಸಿದ್ದಾರೆ ಎಂದು ಚರ್ಚೆ ನಡೀತಿದೆ. ಆದರೆ ಕ್ಲೈಮ್ಯಾಕ್ಸ್‌ನ ಸಣ್ಣ ದೃಶ್ಯದಲ್ಲಿ ಮಾತ್ರ ಅವರು ಕಾಣಿಸಿಕೊಂಡಿದ್ದಾರೆ. ಜೈಲರ್'- 3 ಕೂಡ ಘೋಷಣೆಯಾಗಿದ್ದು ಆ ಚಿತ್ರದಲ್ಲಿ ಈ ದೃಶ್ಯಗಳನ್ನು ಬಳಸಿಕೊಳ್ತಾರಾ ಕಾದು ನೋಡಬೇಕಿದೆ.

'ಜೈಲರ್'- 2 ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಮೊದಲ ವಾರವೇ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದ ಸಿನಿಮಾ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ 1000 ಕೋಟಿ ರೂ. ಗಳಿಕೆ ಕಾಣಬಹುದು ಎಂದು ಕೆಲವರು ಹೇಳುತ್ತಿದ್ದಾರೆ. 160 ಕೋಟಿ ರೂ.ಗೆ ಓಟಿಟಿ ರೈಟ್ಸ್ ಸೇಲ್ ಆಗಿದೆ ಎನ್ನಲಾಗ್ತಿದೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ನವೆಂಬರ್ ಎರಡನೇ ವಾರ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ.