ಹಿರಿಯ ನಟ ಅನಂತ್ ನಾಗ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಶೀಘ್ರದಲ್ಲೇ ಅವರು ಪುಸರಸ್ಕಾ ಸ್ವೀಕರಿಸಲಿದ್ದಾರೆ. ಗಣ್ಯರು, ಅಭಿಮಾನಿಗಳು ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಸಿನಿಮಾಗಳನ್ನು ಪಾತ್ರಗಳನ್ನು ಮೆಲುಕು ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸದಿರಲು ಅನಂತ್ ನಾಗ್ ನಿರ್ಧರಿಸಿದ್ದಾರೆ.

ಈಗಾಗಲೇ ನಾನು ಸಿನಿಮಾಗಳಲ್ಲಿ ನಟಿಸುವುದು ಬಿಟ್ಟಿದ್ದೀನಿ. ಅದಕ್ಕೆ ಅನಾರೋಗ್ಯ ಕಾರಣ ಅಲ್ಲ. ಕಂಟೆಂಟ್ ಇರುವ ಸಿನಿಮಾಗಳು ಬರ್ತಿಲ್ಲ. ಫಿಲ್ಮ್ ಮೇಕರ್ಸ್ ಒಳ್ಳೆ ಸಿನಿಮಾ ಮಾಡುವ ಪ್ರಯತ್ನ ಮಾಡ್ತಿಲ್ಲ. ಅದನ್ನೆಲ್ಲಾ ನೋಡಿ ಬೇಸತ್ತಿದ್ದೀನಿ. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುವ ಆಲೋಚನೆ ಇಲ್ಲ ಎಂದು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಅವರು ಬಣ್ಣ ಹಚ್ಚುತ್ತಿಲ್ಲ ಎನ್ನುವ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕ ಸಂಭ್ರಮದಲ್ಲಿ NDTVಗೆ ನೀಡಿದ ಸಂದರ್ಶನದಲ್ಲಿ ಅನಂತ್ ನಾಗ್ ಈ ವಿಷಯ ತಿಳಿಸಿದ್ದಾರೆ. "ಆರೋಗ್ಯ ವಿಚಾರ ಅಲ್ಲವೇ ಅಲ್ಲ. ಬರ್ತಾ ಬರ್ತಾ ಒಳ್ಳೆ ಸ್ಕ್ರಿಪ್ಟ್ಸ್ ಬರ್ತಿಲ್ಲ. ಎಲ್ಲಾ ಹದಗೆಡುತ್ತಿದೆ. ಈ ಹಿಂದೆ ನಟ, ನಿರ್ದೇಶಕ, ನಿರ್ಮಾಪಕ ಎಲ್ಲರೂ ಸೇರಿ ಕಥೆ ಚರ್ಚೆ ನಡೆಸುತ್ತಿದ್ರು.. ಈಗ ಅದೆಲ್ಲಾ ಇಲ್ಲ. ಪ್ರೇಕ್ಷಕರಿಗೆ ಏನು ಬೇಕು ಎನ್ನುವುದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ತಿಲ್ಲ. ಈಗೋ, ಹಣ ಏನ್ ಮಾಡೋದು. ಪ್ರೇಕ್ಷಕರು ಎಲ್ಲೋದ್ರು, ಓಟಿಟಿ ಅದು, ಇದು ಅಂತಾರೆ.. ಸಿನಿಮಾಗಳು ಯಾಕೆ ಫ್ಲಾಪ್ ಆಗ್ತಿದೆ ?" ಎಂದು ಅವರು ಪ್ರಶ್ನಿಸಿದ್ದಾರೆ.

"ಇತ್ತೀಚೆಗೆ ನಾನು ನಟಿಸಿದ ಐದೂ ಸಿನಿಮಾಗಳು ಫ್ಲಾಪ್ ಆದವು. ಆಗ ನಾನು, 'ಇಷ್ಟೇ ಸಾಕು, ಇನ್ನು ಮುಂದೆ ನಾನಿದನ್ನು ಮಾಡುವುದಿಲ್ಲ' ಅಂತ ಹೇಳಿದೆ" ಎಂದು ಅನಂತ್ ನಾಗ್ ತಿಳಿಸಿದ್ದಾರೆ. ಕಳೆದ ವರ್ಷ ಬಂದ 'ರಾಜದ್ರೋಹಿ' ಅವರು ನಟಿಸಿದ ಕೊನೆಯ ಸಿನಿಮಾ. ಮುಂದೆ ಅವರು ನಟಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಪೋಷಕ ಕಲಾವಿದನಾಗಿ ಚಿತ್ರರಂಗಕ್ಕೆ ಬಂದ ಅನಂತ್ ನಾಗ್ ಬಹಳ ಬೇಗ ಹೀರೊ ಆಗಿದ್ದರು. ಖ್ಯಾತ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು. ಗಂಭೀರ ಪಾತ್ರಗಳಲ್ಲಿ ಮಾತ್ರವಲ್ಲ ಕಾಮಿಡಿ ಸಿನಿಮಾಗಳಲ್ಲಿ ಕೂಡ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ವಿಲನ್ ಆಗುವ ಸಾಹಸ ಮಾಡಿದ್ದು ಇದೆ. ಬಳಿಕ ನಿಧಾನವಾಗಿ ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತರವಾದರು.