ಸಹಜ ನಟ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅರಸಿ ಬಂದಿದೆ. ಐದು ದಶಕಗಳಿಂದ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಪುರಸ್ಕರಸಿ ಈ ಗೌರವ ನೀಡಲಾಗ್ತಿದೆ. ನೂರಾರು ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ಅನಂತ್ ನಟಿಸಿದ್ದಾರೆ. ಆದರೆ ಅದೊಂದು ಸಿನಿಮಾ ಮಾಡುವ ಅವರ ಆಸೆ ಈಡೇರಲೇ ಇಲ್ಲ. ವಿಷ್ಣುವರ್ಧನ್ ಕೂಡ ಆ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಅವರ ಮಹದಾಸೆ ಆಗಿತ್ತು.

ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಅಂದಾಕ್ಷಣ ಡಾ. ರಾಜ್‌ಕುಮಾರ್ ಮಾತ್ರ ನೆನಪಾಗುತ್ತಾರೆ. ವಿಷ್ಣುವರ್ಧನ್, ಅನಂತ್ ನಾಗ್ ಅವರೆಲ್ಲಾ ಚಿತ್ರರಂಗಕ್ಕೆ ಬರುವ ವೇಳೆಗೆ ಸಾಮಾಜಿಕ ಚಿತ್ರಗಳ ಸಂಖ್ಯೆ ಹೆಚ್ಚಾಗಿತ್ತು. ವಿಷ್ಣು ಕೂಡ ಹೆಚ್ಚು ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲಿ ನಟಿಸಲಿಲ್ಲ. ಅನಂತ್ ನಾಗ್ ಅಲ್ಲೊಂದು ಇಲ್ಲೊಂದು ಅಂತಹ ಪ್ರಯತ್ನ ಮಾಡಿದ್ದರು. ಬಸವ ಹಾಗೂ ಬಿಜ್ಜಳರ ಕಥೆಯನ್ನು ತೆರೆಗೆ ತರಬೇಕು ಎನ್ನುವುದು ಅವರ ಆಸೆ ಆಗಿತ್ತು.

ವಿಷ್ಣುವರ್ಧನ್ ಜೊತೆ ಸೇರಿ ಇಂತಾದೊಂದು ಸಿನಿಮಾ ಮಾಡಬೇಕು ಎಂದು ಅನಂತ್ ನಾಗ್ ಕನಸು ಕಂಡಿದ್ದರು. ಆದರೆ ಯಾಕೋ ಅದು ಸಾಧ್ಯವಾಗಿರಲಿಲ್ಲ. ಡೆಕ್ಕನ್ ಎರಾಲ್ಡ್ ಪತ್ರಿಕೆ ಸಂದರ್ಶನದಲ್ಲಿ ಈ ವಿಚಾರವನ್ನು ಅವರು ನೆನಪಿಸಿಕೊಂಡಿದ್ದಾರೆ. "ನಾನು ಸಾಕಷ್ಟು ಇಂಗ್ಲೀಷ್ ಸಿನಿಮಾಗಳನ್ನು ನೋಡ್ತಿದ್ದೆ. 'ಬೆಕ್ಕೆಟ್' ಸಿನಿಮಾ ನನ್ನನ್ನು ಬಹಳ ಕಾಡಿತ್ತು. 'ಡಾಕ್ಟರ್ ಝಿವ್ಯಾಗೊ', 'ರ್ಯಾನ್ಸ್ ಡಾಟರ್', 'ಲಾರೆನ್ಸ್ ಆಫ್ ಅರೆಬಿಯಾ' ರೀತಿಯ ಸಿನಿಮಾಗಳನ್ನು ನೋಡಿ ಬಹಳ ಪ್ರೇರಣೆಗೊಂಡಿದ್ದೆ. ನಾನು ಕರ್ನಾಟಕಕ್ಕೆ ಬಂದಾಗ ಕಾರ್ನಾಡ್ ಬರೆದ 'ತಲೆದಂಡ' ಓದಿದ್ದೆ. ಹಾಗಾಗಿ ಬಸವ, ಬಿಜ್ಜಳರ ಕಥೆಯನ್ನು ತೆರೆಗೆ ತರಬೇಕು ಅಂತ ಮನಸ್ಸು ಮಾಡಿದ್ದೆ" ಎಂದು ಅನಂತ್ ನಾಗ್ ಹೇಳಿದ್ದಾರೆ.

ನಾನು ವಿಷ್ಣುವರ್ಧನ್ ಬಳಿ ಕೂಡ ಮಾತನಾಡಿದ್ದೆ. ಆ ಸಿನಿಮಾ ನಿರ್ದೇಶನ ಮಾಡುವಂತೆ ಶಂಕರ್ ನಾಗ್‌ಗೂ ಹೇಳಿದ್ದೆ.. ವಿಷ್ಣು ನೀವು ಬಿಜ್ಜಳನ ಪಾತ್ರ ಮಾಡಿದ್ರೆ ನಾನು ಬಸವ ಪಾತ್ರ ಮಾಡ್ತೀನಿ. ನೀವು ಬಸವ ಮಾಡಿದ್ರೆ, ನಾನು ಬಿಜ್ಜಳ ಪಾತ್ರ ಮಾಡೋಕೆ ಸಿದ್ಧ ಎಂದಿದ್ದೆ.. ಮಾಡಿದ್ರೆ ನಿಜಕ್ಕೂ ಅದು ಒಳ್ಳೆ ಸಿನ್ಮಾ ಆಗ್ತಿತ್ತು. ಆದ್ರೆ ಸಾಧ್ಯವಾಗಲಿಲ್ಲ ಎಂದು ಅನಂತ್ ನಾಗ್ ಬೇಸರ ವ್ಯಕ್ತಪಡಿಸಿದ್ದಾರೆ.