ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಚಿತ್ರರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಇದು ಸಂತಸ ತಂದಿದೆ. ಪ್ರಧಾನಿ ಮೋದಿ ಹಾಗೂ ಕರ್ನಾಟಕ ಸಿಎಂ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ಸೋಶಿಯಲ್ ಮೀಡಿಯಾ ಮೂಲಕ ಅನಂತ್ ನಾಗ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಆದರೆ ಇಂತಹ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅನಂತ್ ನಾಗ್ ಅವರ ದೊಡ್ಡ ಅಭಿಮಾನಿ ಆಗಿದ್ದರು ಪುನೀತ್ ರಾಜ್‌ಕುಮಾರ್. 'ಪರಮಾತ್ಮ' ಚಿತ್ರದಲ್ಲಿ ಇಬ್ಬರು ತಂದೆ ಮಗನಾಗಿ ಒಟ್ಟಿಗೆ ನಟಿಸಿದ್ದರು. ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಪುನೀತ್ ರಾಜ್‌ಕುಮಾರ್ ಮನವಿ ಮಾಡಿದ್ದರು. ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಕಳೆದ ವರ್ಷ ಪದ್ಮಭೂಷಣ ಗೌರವ ಅವರಿಗೆ ಸಿಕ್ಕಿತ್ತು. ಈಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಅಪ್ಪು ಇದ್ದಿದ್ರೆ ಈಗ ಮತ್ತಷ್ಟು ಖುಷಿಪಡುತ್ತಿದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಪುನೀತ್ ಇಂಗಿತ ವ್ಯಕ್ತಪಡಿಸಿದ್ದ ಟ್ವೀಟ್ ಮತ್ತೆ ವೈರಲ್ ಆಗ್ತಿದೆ. "ಪುನೀತ್ ರಾಜ್‌ಕುಮಾರ್ ಬದುಕಿದ್ದಿದ್ರೆ ಅವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ" ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಅನಂತ್ ನಾಗ್ ಚಿತ್ರರಂಗ ಪ್ರವೇಶಿಸಿ ನೂರಾರು ಸಿನಿಮಾಗಳಲ್ಲಿ ನಟಿಸಿದರು ಅವರಿಗೆ ಪದ್ಮ ಪ್ರಶಸ್ತಿ ಸಿಗುವುದು ಬಹಳ ತಡವಾಗಿತ್ತು. ಆದರೆ ಪದ್ಮಭೂಷಣ ಸಿಕ್ಕ ಮರುವರ್ಷವೇ ದಾದಾ ಸಾಹೇಬ್ ಫಾಲ್ಕೆ ಗೌರವ ಲಭಿಸಿರುವುದು ವಿಶೇಷ.

ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಮೊದಲ ಸಿನಿಮಾ 'ಕವಲುದಾರಿ'ಯಲ್ಲಿ ಕೂಡ ಅನಂತ್ ನಾಗ್ ನಟಿಸಿದ್ದರು. ಪ್ರಮುಖ ಪಾತ್ರದಲ್ಲಿ ಚಿತ್ರಕ್ಕೆ ಬಲ ತುಂಬಿದ್ದರು. 'ಭಕ್ತಪ್ರಹ್ಲಾದ' ಚಿತ್ರದಲ್ಲಿ ಅನಂತ್ ನಾಗ್ ನಾರದರ ಪಾತ್ರ ಮಾಡಿದ್ದರು. ಬಾಲಕನಾಗಿದ್ದ ಅಪ್ಪು ಆ ಚಿತ್ರದಲ್ಲಿ ಪ್ರಹ್ಲಾದನ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಗೊತ್ತೇಯಿದೆ. ಚಿಕ್ಕಂದಿನಿಂದ ಅನಂತ್ ನಾಗ್ ಅವರ ಅಭಿಮಾನಿ ಪುನೀತ್ ರಾಜ್‌ಕುಮಾರ್.