ಸೂಪರ್ ಹಿಟ್ 'ಅಮೃತವರ್ಷಿಣಿ' ಸಿನಿಮಾ ಸೀಕ್ವೆಲ್ ಬರ್ತಿದೆ. ದಿನೇಶ್ ಬಾಬು ನಿರ್ದೇಶನದಲ್ಲಿ 1997ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಈ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ರಮೇಶ್ ಅರವಿಂದ್, ಸುಹಾಸಿನಿ ಹಾಗೂ ಶರತ್ ಬಾಬು ನಟಿಸಿ ಗೆದ್ದಿದ್ದರು.
ಇದೀಗ ಬಿ.ಎಸ್. ಸುಧೀಂದ್ರ ಹಾಗೂ ಆರ್. ನವೀನ್ ನಿರ್ಮಾಣದಲ್ಲಿ 'ಅಮೃತವರ್ಷಿಣಿ-2' ಚಿತ್ರ ಮೂಡಿಬರಲು ಸಜ್ಜಾಗುತ್ತಿದೆ. ಅದೇ ಕಥೆಯನ್ನು ಮತ್ತೆ ದಿನೇಶ್ ಬಾಬು ಮುಂದುವರೆಸುತ್ತಿದ್ದಾರೆ. ಜನವರಿ 14ರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಕೊಡೈಕೆನಾಲ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.
ಎವರ್ಗ್ರೀನ್ 'ಅಮೃತವರ್ಷಿಣಿ' ಸಿನಿಮಾ ಚಿತ್ರ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. ಭಾವನಾತ್ಮಕ ಕಥಾಹಂದರ, ದೇವ ಸಂಗೀತ ಹಾಗೂ ಕಲಾವಿದರ ಮನೋಜ್ಞ ಅಭಿನಯದಿಂದಾಗಿ ಈ ಚಿತ್ರ ಗೆದ್ದಿತ್ತು. ಸದ್ಯ ಎಲ್ಲೆಲ್ಲೂ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಈಗ ಸುಮಾರು ಮೂರು ದಶಕಗಳ ಬಳಿಕ 'ಅಮೃತವರ್ಷಿಣಿ' ಚಿತ್ರದ ಎರಡನೇ ಭಾಗ ನಿರ್ಮಾಣವಾಗುತ್ತಿರುವುದು ವಿಶೇಷ. ರಮೇಶ್ ಅರವಿಂದ್ ಹಾಗೂ ಸುಹಾಸಿನಿ ಕೂಡ 'ಅಮೃತವರ್ಷಿಣಿ- 2' ಚಿತ್ರದಲ್ಲಿ ನಟಿಸುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ.
ಮೊದಲ ಚಿತ್ರದ ಭಾವನಾತ್ಮಕ ಸೊಗಡನ್ನು ಉಳಿಸಿಕೊಂಡು, ಹೊಸತನದೊಂದಿಗೆ ಎರಡನೇ ಭಾಗವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ. ರಾಮಕೃಷ್ಣ ಹಾಗೂ ತಾರಾ ಈ ಬಾರಿ ತಾರಾಗಣಕ್ಕೆ ಸೇರಿಕೊಂಡಿದ್ದಾರೆ. ಮೂಲ ಚಿತ್ರದ ಯಶಸ್ಸು ಹಾಗೂ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಅವರ ಜನಪ್ರಿಯ ಜೋಡಿಯ ಅಭಿನಯವನ್ನು ಮತ್ತೊಮ್ಮೆ ತೆರೆಮೇಲೆ ಕಾಣಲು ಅಭಿಮಾನಿಗಳು ಸಿನಿರಸಿಕರು ಕಾಯುತ್ತಿದ್ದಾರೆ.
ಭಾರತಿದೇವಿ ನಿರ್ಮಾಣದಲ್ಲಿ ಬಂದಿದ್ದ ರೊಮ್ಯಾಂಟಿಕ್ ಥ್ರಿಲ್ಲರ್ 'ಅಮೃತವರ್ಷಿಣಿ' ಸಿನಿಮಾ ಇವತ್ತಿಗೂ ಕನ್ನಡ ಸಿನಿರಸಿಕರ ಫೇವರಿಟ್ ಎನಿಸಿಕೊಂಡಿದೆ. ನೆಗೆಟಿವ್ ರೋಲ್ನಲ್ಲಿ ರಮೇಶ್ ಅರವಿಂದ್ ನಟಿಸಿ ಗಮನ ಸೆಳೆದಿದ್ದರು. ಈ ಬಾರಿ ಅವರ ಪಾತ್ರಕ್ಕೆ ಯಾವ ರೀತಿಯ ಆಯಾಮ ಸಿಗುತ್ತೆ ಕಾದು ನೋಡಬೇಕಿದೆ.