ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅವರ ಹಿಟ್ ಸಿನಿಮಾಗಳು ಒಂದೊಂದಾಗಿ ರೀ- ರಿಲೀಸ್ ಆಗುತ್ತಲೇ ಇದೆ. 'ಶಾಸ್ತ್ರಿ', 'ಕಲಾಸಿಪಾಳ್ಯ', 'ನವಗ್ರಹ' ಸೇರಿ ಹಲವು ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದು ಗೊತ್ತೇಯಿದೆ. ಈಗ 'ಅಣ್ಣಾವ್ರು' ಸಿನಿಮಾ ಮತ್ತೆ ತೆರೆಗಪ್ಪಳಿಸಲು ಸಜ್ಜಾಗಿದೆ.
ತಮಿಳಿನ 'ದಳಪತಿ' ರೀಮೇಕ್ 'ಅಣ್ಣಾವ್ರು' ಸಿನಿಮಾ 23 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಎಂ. ಸಿ ದಯಾನಂದ್ ನಿರ್ಮಾಣದ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿದ್ದರು. ಸುಹಾಸಿನಿ, ಕನ್ನಿಹಾ ಹಾಗೂ ಸುಮಿತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 'ಅಣ್ಣಾವ್ರು' ಸಿನಿಮಾ ತೆರೆಕಂಡ ಒಂದೇ ವಾರಕ್ಕೆ ಸುದೀಪ್ ನಟನೆಯ 'ಸ್ವಾತಿಮುತ್ತು' ಹಾಗೂ ಉಪೇಂದ್ರ ಅಭಿನಯದ 'ಗೋಕರ್ಣ' ಸಿನಿಮಾಗಳು ಕೂಡ ತೆರೆಗೆ ಬಂದಿತ್ತು.
ನಿರೀಕ್ಷಿತ ಮಟ್ಟದಲ್ಲಿ ಆಗ 'ಅಣ್ಣಾವ್ರು' ಸಿನಿಮಾ ಗೆಲ್ಲಲಿಲ್ಲ. ಎರಡು ದಶಕಗಳ ಬಳಿಕ ಈಗ ಮರುಬಿಡುಗಡೆಗೆ ಸಜ್ಜಾಗ್ತಿದೆ. ಮಹೇಶ್ ಆರ್. ವಿ ರಾಜ್ಯದ್ಯಂತ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. "ನಾವು ಅಂಬರೀಶ್ ಅವರ ಅಭಿಮಾನಿ. ಹಾಗಾಗಿ ಸಿನಿಮಾ ಮರುಬಿಡುಗಡೆಗೆ ಮುಂದಾಗಿದ್ದೇನೆ. ನವೆಂಬರ್‌ನಲ್ಲೇ ಸಿನಿಮಾ ತೆರೆಗೆ ತರುವ ಪ್ರಯತ್ನ ಮಾಡಿದ್ವಿ. ಸಾಧ್ಯವಾಗ್ತಿಲ್ಲ, ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗಬಹುದು" ಎಂದಿದ್ದಾರೆ.
ಮಣಿರತ್ನಂ ನಿರ್ದೇಶನದ 'ದಳಪತಿ' ಸಿನಿಮಾ ತಮಿಳಿನಲ್ಲಿ ಸಖತ್ ಸದ್ದು ಮಾಡಿತ್ತು. ಮಹಾಭಾರತದ ದುರ್ಯೋಧನ ಹಾಗೂ ಕರ್ಣನ ಸ್ನೇಹದ ಕಥೆಯಿಂದ ಪ್ರೇರಣೆಗೊಂಡು ಚಿತ್ರದಲ್ಲಿ ಸೂರ್ಯ ಹಾಗೂ ದೇವರಾಜ್ ಪಾತ್ರಗಳನ್ನು ಮಣಿರತ್ನಂ ಕಟ್ಟಿಕೊಟ್ಟಿದ್ದರು. ಬೇರೆ ಭಾಷೆಗಳಲ್ಲಿ ಯಾರು ರೀಮೆಕ್ ಮಾಡುವ ಸಾಹಸ ಮಾಡಲಿಲ್ಲ. ಕನ್ನಡದಲ್ಲಿ ಓಂಪ್ರಕಾಶ್ ರಾವ್ ಆ ಪ್ರಯತ್ನ ಮಾಡಿದ್ದರು. 'ಅಣ್ಣಾವ್ರು' ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ಮಾಡಿದ್ದರು.
Rebel Star #Ambareesh , Challenging Star #Darshan #Annavru is all set for a grand re-release in theatres soon🔥 pic.twitter.com/mYkQNe7kYO
— Cinema In Bangalore (@CinemaInBglr) November 8, 2026