ಒಂದು ಸಿನಿಮಾ ಶುರುವಾಗಿ ತೆರೆಗೆ ಬರುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಮಾತುಕತೆ ಹಂತದಲ್ಲೇ ಸಿನಿಮಾಗಳ ಕಥೆ ಕೂಡ ಮುಗಿದು ಹೋಗುತ್ತೆ. ಚಿತ್ರೀಕರಣ ಶುರು ಮಾಡಿ ನಿಂತಿರುವ ಸಿನಿಮಾಗಳು ಸಾಕಷ್ಟಿವೆ. ಅದರಲ್ಲೂ ದೊಡ್ಡ ಪ್ರಾಜೆಕ್ಟ್‌ಗಳನ್ನು ಅರ್ಧಕ್ಕೆ ನಿಲ್ಲಿಸುವುದು ನಿರ್ಮಾಪಕರಿಗೆ ಹೊರೆಯಾಗುತ್ತದೆ.

'ಪುಷ್ಪ'- 2 ಬಳಿಕ ಅಟ್ಲಿ ನಿರ್ದೇಶನದ 'ರಾಕಾ' ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. 'ರಾಕಾ' ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸಬೇಕಿದೆ. ಇನ್ನು ಹೆಸರಿಡದ ಈ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಆದರೆ ದಿಢೀರನೆ ಈ ಸಿನಿಮಾ ನಿಂತುಹೋಯ್ತು ಎನ್ನುವ ವದಂತಿ ಹರಿದಾಡ್ತಿದೆ.

ರಜನಿಕಾಂತ್ ನಟನೆಯ 'ಕೂಲಿ' ಚಿತ್ರವನ್ನು ಲೋಕೇಶ್ ಕಟ್ಟಿಕೊಟ್ಟಿದ್ದರು. ಬಳಿಕ 'DC' ಚಿತ್ರದಲ್ಲಿ ಹೀರೊ ಆಗಿ ನಟಿಸಿ ಗೆದ್ದಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿದೆ. ಮುಂದೇನು ಎಂದು ಕೇಳುವ ಸಮಯದಲ್ಲೇ ಅಲ್ಲು ಅರ್ಜುನ್ ನಟಿಸಬೇಕಿದ್ದ ಸಿನಿಮಾ ನಿಂತಿದೆ ಎನ್ನುವ ಊಹಾಪೋಹ ಶುರುವಾಗಿದೆ. ಲೋಕೇಶ್ ಹೇಳಿದ ಒನ್‌ಲೈನ್ ಸ್ಟೋರಿ ಅಲ್ಲು ಅರ್ಜುನ್‌ಗೆ ಇಷ್ಟವಾಗಿತ್ತು. ಆದರೆ ಕಂಪ್ಲೀಟ್ ಸ್ಕ್ರಿಪ್ಟ್ ಕೇಳಿ ಬೇಸರಗೊಂಡಿದ್ದಾರೆ. ಅದೇ ಕಾರಣಕ್ಕೆ ಸಿನಿಮಾ ಕೈಬಿಡಲು ಮುಂದಾಗಿದ್ದಾರೆ ಎಂದು ಗುಲ್ಲಾಗಿದೆ.

ಅಲ್ಲು ಅರ್ಜುನ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಸಿನಿಮಾ ನಿಂತುಹೋಯ್ತು ಎನ್ನವುದು ಕೇವಲ ವದಂತಿ. ಡಿಸೆಂಬರ್‌ನಿಂದಲೇ ಬನ್ನಿ-ಲೋಕೇಶ್ ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಕೈದಿ', 'ವಿಕ್ರಂ' ಹಾಗೂ 'ಲಿಯೋ' ರೀತಿಯ ಹಿಟ್ ಸಿನಿಮಾಗಳನ್ನು ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ.