ಮುಂದಿನ ವಾರವೇ 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ನಿಮಿತ್ ಮಲ್ಹೋತ್ರಾ ಹಾಗೂ ಯಶ್ ಕನಸು ತೆರೆಮೇಲೆ ಅನಾವರಣ ಆಗಲಿದೆ. ಈಗಾಗಲೇ ಅಮೆರಿಕಾದಲ್ಲಿ ಪ್ರೀಮಿಯರ್ ಶೋ ಕೂಡ ನಡೆದಿದೆ. ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ. ಯಶ್ ಬದಲು ಬೇರೊಬ್ಬರು ಚಿತ್ರ ನಿರ್ಮಾಣ ಮಾಡಬೇಕಿತ್ತು ಎನ್ನುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.

ಎರಡು ಭಾಗಗಳಾಗಿ 'ರಾಮಾಯಣ' ಕಾವ್ಯಾವನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ನಾಲ್ಕೈದು ವರ್ಷಗಳ ಹಿಂದೆ ಶುರುವಾಗಿದ್ದಲ್ಲ. 10 ವರ್ಷಗಳ ಹಿಂದೆಯೇ ಇಂತಾದೊಂದು ಲೆಕ್ಕಾಚಾರ ಶುರುವಾಗಿತ್ತು. ಆದರೆ ಯಶ್ ಮಾತ್ರ ತಂಡದಲ್ಲಿ ಇರಲಿಲ್ಲ. ಕೋವಿಡ್ ಹಿನ್ನಲೆಯಲ್ಲಿ ಒಂದಷ್ಟು ಬದಲಾವಣೆಗಳಾಗಿ ಬಳಿಕ ಯಶ್ ತಂಡ ಸೇರುವಂತಾಯಿತು. ನಮಿತ್ ಮಲ್ಹೋತ್ರಾ ಹಾಗೂ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಮೊದಲಿಗೆ ಇಂತಾದೊಂದು ಸಾಹಸಕ್ಕೆ ಕೈ ಹಾಕಿದ್ದರು.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಭಾರೀ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ನಮಿತ್ ಮಲ್ಹೋತ್ರಾ, ಮಧು ಮಂತೆನಾ ಜೊತೆ ಸೇರಿ ಅವರು 'ರಾಮಾಯಣ' ಸಿನಿಮಾ ಕನಸು ಕಂಡಿದ್ದರು. ಸಾಕಷ್ಟು ಚರ್ಚೆ ನಡೆದಿತ್ತು. ಸ್ಕ್ರಿಪ್ಟ್ ಕೆಲಸಗಳನ್ನು ಆರಂಭಿಸಿದ್ದರು. ನಿತೇಶ್ ತಿವಾರಿ ನಿರ್ದೇಶನದಲ್ಲೇ ಸಿನಿಮಾ ಮೂಡಿ ಬರಬೇಕಿತ್ತು. ಆದರೆ ಪ್ರಮುಖ ಪಾತ್ರಗಳಲ್ಲಿ ಯಾರೆಲ್ಲಾ ನಟಿಸ್ತಾರೆ ಎನ್ನುವುದು ಖಚಿತವಾಗಿರಲಿಲ್ಲ. ಶ್ರೀರಾಮನ ಪಾತ್ರದಲ್ಲಿ ರಾಮ್‌ಚರಣ್ ನಟಿಸಬಹುದು ಎನ್ನಲಾಗಿತ್ತು. ಅಂತಿಮವಾಗಿ ಈಗ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಅಂದಹಾಗೆ ಕೆಲ ವರ್ಷಗಳ ಹಿಂದೆ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಅಲ್ಲು ಅರವಿಂದ್ ಗುರಿಯಾಗಿದ್ದರು. ಯಶ್ ಬಗ್ಗೆ ಅವರು ಆಡಿದ್ದ ಮಾತೊಂದು ವೈರಲ್ ಆಗಿತ್ತು. 'ಕೆಜಿಎಫ್' ಸಿನಿಮಾ ಬರೋ ಮುನ್ನ ಯಶ್ ಯಾರು ? ಆತ ಎಷ್ಟು ದೊಡ್ಡ ಹೀರೊ ಆಗಿದ್ದ .. ದೊಡ್ಡ ಸಿನಿಮಾ ಮಾಡಿ ತೋರಿಸಿದ್ಮೇಲೆ ಆತ ಯಾರು ಅಂತ ಗೊತ್ತಾಯ್ತು ಎಂದಿದ್ದರು. ಇದೀಗ ಅದೇ ಅಲ್ಲು ಅರವಿಂದ್ ನಿರ್ಮಿಸಬೇಕಿದ್ದ 'ರಾಮಾಯಣ' ಚಿತ್ರವನ್ನು ಯಶ್ ನಿರ್ಮಿಸಿ ಗೆದ್ದಿದ್ದಾರೆ. ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ.

ಸೋನಿ ಪಿಕ್ಚರ್ಸ್ ಸಂಸ್ಥೆ ಹಾಲಿವುಡ್‌ ಅಂಗಳದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆ ಮಾಡ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ಕಲೆಕ್ಷನ್ ಆಗಿದೆ. ದೊಡ್ಡಮಟ್ಟದ ಓಪನಿಂಗ್ ನಿರೀಕ್ಷೆ ಮಾಡಲಾಗ್ತಿದೆ. ಮೊದಲಿಗೆ ಅಲ್ಲು ಅರವಿಂದ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಹಾಗಾಗಿ ಶ್ರೀರಾಮನ ಪಾತ್ರದಲ್ಲಿ ಸೋದರಳಿಯ ರಾಮ್‌ಚರಣ್ ನಟಿಸಬಹುದು ಎನ್ನಲಾಗಿತ್ತು. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಗಲಿಲ್ಲ. ರಾವಣ ಪಾತ್ರಕ್ಕೆ ಹೃತಿಕ್ ರೋಷನ್ ಸೇರಿ ಸಾಕಷ್ಟು ಕಲಾವಿದರು ಹೆಸರು ಆಗ ಕೇಳಿಬಂದಿತ್ತು.