ಕನ್ನಡ ನಟ ಕಿಚ್ಚ ಸುದೀಪ್ ಪರಭಾಷಾ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ದಶಕದ ಹಿಂದೆಯೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಬಂದವರು. 'ಈಗ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದವರು. ಆ ಬಳಿಕ ಕೂಡ ಪರಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಬೇರೆ ಭಾಷೆಗಳಲ್ಲಿ ಬಣ್ಣ ಹಚ್ಚಲು ಮನಸ್ಸಿಲ್ಲ ಎಂದಿದ್ದಾರೆ. ಸದ್ಯ ಅಜಿತ್ ಜೊತೆ ನಟಿಸುವಂತೆ ಮಾತುಕತೆ ನಡೀತಿದೆ ಎನ್ನಲಾಗ್ತಿದೆ.

ಅಜಿತ್ ನಟನೆಯ 'ಡೇರ್ ಡೆವಿಲ್' ಸಿನಿಮಾ ಘೋಷಣೆ ಆಗಿದೆ. ನವೆಂಬರ್‌ನಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ನಡೀತಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಈಗ ಲಾಲ್ ಬದಲು ಕಿಚ್ಚ ಸುದೀಪ್ ಜೊತೆ ಚಿತ್ರತಂಡ ಮಾತುಕತೆ ನಡೆಸ್ತಿದೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ತಮಿಳು ಮಾಧ್ಯಮಗಳಲ್ಲಿ ಇಂತಾದೊಂದು ಸುದ್ದಿ ಸದ್ದು ಮಾಡ್ತಿದೆ.

ಡೇಟ್ಸ್ ಹೊಂದಿಸಲು ಸಾಧ್ಯವಾಗದೇ ಇರುವುದರಿಂದ 'ಡೇರ್ ಡೆವಿಲ್' ಚಿತ್ರದಿಂದ ಮೋಹನ್ ಲಾಲ್ ಹೊರ ಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ. ಹಾಗಾಗಿ ಬೇರೆ ನಟನ ಹುಡುಕಾಟದಲ್ಲಿರುವ ಚಿತ್ರತಂಡ ಸುದೀಪ್ ಅವರಿಗೂ ಆಫರ್ ಕೊಟ್ಟಿದೆ ಎಂದು ಮಾತುಗಳು ಕೇಳಿಬರ್ತಿದೆ. ಕೊನೆಯದಾಗಿ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿ ನಟಿಸಿ ಅಜಿತ್ ಸಕ್ಸಸ್ ಕಂಡಿದ್ದರು. ಬಳಿಕ ಕಾರ್ ರೇಸ್‌ನಲ್ಲಿ ಅವರು ಮುಳುಗಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ರೇಸ್‌ಗೆ ತಮಿಳುನಾಡು ಸಿಎಂ ವಿಜಯ್ ಕೂಡ ಮೆರಗು ನೀಡಿದ್ದರು. ವಿಜಯ್ ಹಾಗೂ ಅಜಿತ್ ಇಬ್ಬರನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದರು.

'ಡೇರ್ ಡೆವಿಲ್' ಚಿತ್ರಕ್ಕೆ ಅದಿಕ್ ರವಿಚಂದ್ರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀಲೀಲಾ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಸುದೀಪ್ ತಂಡ ಸೇರಿಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಪರಭಾಷಾ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸೋಕೆ ಸುದೀಪ್ ಹಿಂದೇಟು ಹಾಕುತ್ತಿದ್ದಾರೆ. ಸಾಕಷ್ಟು ಅವಕಾಶಗಳು ಬರ್ತಿವೆ. ಆದರೆ ಒಪ್ಪಿಕೊಳ್ಳುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ನಾವು ಪ್ರೀತಿಯಿಂದ ಹೋಗಿ ಅವರ ಸಿನಿಮಾಗಳಲ್ಲಿ ನಟಿಸ್ತೀವಿ, ಆದ್ರೆ ಕನ್ನಡದಲ್ಲಿ ನಟಿಸುವಂತೆ ಕೇಳಿದ್ರೆ ಪರಭಾಷೆಯ ಸ್ಟಾರ್ ನಟರು ಒಪ್ಪಲ್ಲ ಎಂದು ಕಿಚ್ಚ ಬೇಸರ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಇನ್ಮುಂದೆ ನಾನು ನಟಿಸಲ್ಲ ಎಂದಿದ್ದರು.