ಮೋಹನ್ ಲಾಲ್ ನಟನೆಯ 'ದೃಶ್ಯಂ- 3' ಸಿನಿಮಾ ತೆರೆಕಂಡು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದು ಗೊತ್ತೇಯಿದೆ. ಇದೀಗ ಹಿಂದಿಗೆ ಸಿನಿಮಾ ರೀಮೆಕ್ ಆಗಿ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಟ್ರೈಲರ್ ಹೊರಬಂದು ಸದ್ದು ಮಾಡ್ತಿದೆ. ವಿಜಯ್ ಸಲಗಾಂವ್ಕರ್ ಮತ್ತೆ ತನ್ನ ಕುಟುಂಬದ ರಕ್ಷಣೆಗಾಗಿ ನಿಂತಿದ್ದಾರೆ. ಈ ಬಾರಿ ಹೋರಾಟ ದೊಡ್ಡದಾಗಿಯೇ ಇರುತ್ತದೆ.
ಅಕ್ಟೋಬರ್ 2ರಂದು 'ದೃಶ್ಯಂ- ದಿ ಕನ್‌ಕ್ಲೂಷನ್' ಸಿನಿಮಾ ತೆರೆಗೆ ಬರಲಿದೆ. ಸ್ಯಾಮ್ ತಾಯಿ ಮೀರಾ ದೇಶ್‌ಮುಖ್(ತಬು) ಈ ಬಾರಿ ನ್ಯಾಯ ಬಿಟ್ಟು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಹಾಗಾಗಿ ವಿಜಯ್ ಫ್ಯಾಮಿಲಿ ವಿರುದ್ಧ ಸಮರ ಸಾರಿದ್ದಾಳೆ. ವಿಜಯ್ ವಿರುದ್ಧ ಮೂವರು ಅಖಾಡಕ್ಕೆ ಇಳಿಯುತ್ತಿದ್ದು ಹೋರಾಟ ಬಹ ರೋಚಕವಾಗಿಯೇ ಇರುತ್ತದೆ ಎನ್ನುವುದು ಗೊತ್ತಾಗ್ತಿದೆ.
ಈಗಾಗಲೇ ಕಣ್ಮರೆಯಾಗಿರುವ ಮಗನಿಗಾಗಿ ವಿಜಯ್ ಕುಟುಂಬದ ವಿರುದ್ಧ ಮೀರಾ ಹಗೆ ಸಾಧಿಸುತ್ತಿದ್ದಾಳೆ. 2ನೇ ಭಾಗದ ಕಥೆಯಲ್ಲಿ ಕೂಡ ಅಪರಾಧ ಸಾಬೀತು ಮಾಡೋಕೆ ಸಾಧ್ಯವಾಗಲಿಲ್ಲ. ಕಥೆಗಾರ ಮುರದ್ ಅಲಿ ಜೊತೆ ಸೇರಿ ವಿಜಯ್ ಆಡಿದ ಚದುರಂಗದ ಆಟಕ್ಕೆ ಪೊಲೀಸ್ ಇಲಾಖೆ ಬೆಸ್ತುಬಿದ್ದಿತ್ತು. ವಿಜಯ್ ಮುಂದಿನ ನಡೆ ಏನು ಎಂದು ಮುರದ್ ಅಲಿ ಬಳಿ ಮೀರಾ ಕೇಳುವುದರೊಂದಿಗೆ 'ದೃಶ್ಯಂ- ದಿ ಕನ್‌ಕ್ಲೂಷನ್' ಚಿತ್ರದ ಟ್ರೈಲರ್ ಪ್ರಾರಂಭವಾಗುತ್ತದೆ.
ಎಸ್ಪಿ (ಕ್ರೈಮ್ ಬ್ರಾಂಚ್), ಜೈದೀಪ್ ಅಹ್ಲಾವತ್ ಕೂಡ ವಿಜಯ್ ಹಿಂದೆ ಬಿದ್ದಿದ್ದಾನೆ. ಮತ್ತೊಂದು ಕಡೆ ವಿಜಯ್‌ಗೆ ಶಿಕ್ಷೆ ಕೊಡಿಸಲು ಖ್ಯಾತ ವಕೀಲ(ಪ್ರಕಾಶ್ ರಾಜ್)ನ ಆಗಮನವಾಗಿದೆ. ಹಾಗಾಗಿ ಮೂವರ ಎದುರು ವಿಜಯ್ ಕುಟುಂಬದ ಬದುಕಿನ ಹೋರಾಟ ನಡೆಯಲಿದೆ. ಸ್ಟಾರ್ ಸ್ಟುಡಿಯೋ 18 ಮತ್ತು ಪನೋರಮಾ ಸ್ಟುಡಿಯೋಸ್ ನಿರ್ಮಾಣದ ಚಿತ್ರವನ್ನು ಅಭಿಷೇಕ್ ಪಾಠಕ್ ನಿರ್ದೇಶಿಸಿದ್ದಾರೆ. ಅಜಯ್ ದೇವಗನ್, ಶ್ರೀಯಾ ಮತ್ತೆ ತ್ಮ ಪಾತ್ರಗಳನ್ನು ಮುಂದುವರೆಸಿದ್ದಾರೆ.
ದೃಶ್ಯಂ ಚಿತ್ರದ ಹಿಂದಿನ ಎರಡು ಭಾಗಗಳು ರೀಮೆಕ್ ಆಗಿದ್ದರೂ ಹಿಂದಿಯಲ್ಲಿ ಮೂರನೇ ಭಾಗವನ್ನು ಬದಲಿಸಿಕೊಂಡಿದ್ದಾರೆ. ಟ್ರೈಲರ್ ನೋಡಿದರೆ ಅದು ಅರ್ಥವಾಗುತ್ತದೆ. ಚಿತ್ರತಂಡ ಈ ಹಿಂದೆಯೇ ಈ ವಿಚಾರವನ್ನು ಹೇಳಿತ್ತು. ಮಲಯಾಳಂನಲ್ಲಿ ಬಂದಿದ್ದ 'ದೃಶ್ಯಂ- 3' ಸಿನಿಮಾ ಕನ್ನಡ, ತಮಿಳು, ತೆಲುಗಿಗೂ ಡಬ್ ಆಗಿತ್ತು. ಆದರೆ ಹಿಂದಿಯಲ್ಲಿ ಬಂದಿರಲಿಲ್ಲ.
ಕೆಲ ದೃಶ್ಯಗಳಲ್ಲಿ ಹೋಲಿಕೆ ಇದ್ದರೂ ಪಾರ್ಟ್-3 ರೀಮೆಕ್ ಅಲ್ಲ ಎನ್ನುವುದು ಸ್ಪಷ್ಟವಾಗ್ತಿದೆ. ಮುಖ್ಯವಾಗಿ ಮಲಯಾಳಂನಲ್ಲಿ ಕ್ಲೈಮ್ಯಾಕ್ಸ್ ಬಗ್ಗೆ ಟೀಕೆ ಎದುರಾಗಿತ್ತು. ಹಿಂದಿಯಲ್ಲಿ ಅದನ್ನು ಬದಲಿಸಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ. 'ದೃಶ್ಯಂ' ಸರಣಿ ಸೂಪರ್ ಹಿಟ್ ಸರಣಿ ಎಂದೇ ಹೇಳಬೇಕು. ಮಲಯಾಳಂನಲ್ಲಿ 3 ಭಾಗ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಆದರೂ ಕೆಲವರಿಗೆ ಇಷ್ಟವಾಗಿತ್ತು. 4ನೇ ಭಾಗ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.