ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಜೈಲರ್- 2' ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸಿನಿಮಾ ಬಿಡುಗಡಗೆ ಇನ್ನೊಂದು ವಾರ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಇನ್ನು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗುವ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕಾದಿದೆ ಎನ್ನಲಾಗ್ತಿದೆ.
3 ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಸಿನಿಮಾ 700 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆಗ ಸೀಕ್ವೆಲ್ ಮಾಡುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಸಿನಿಮಾ ಗೆದ್ದ ಮೇಲೆ ಪ್ರೀಕ್ವೆಲ್ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಅಭಿಮಾನಿಗಳು ಹೇಳಿದ್ದರು. ಅಂತಿಮವಾಗಿ ನೆಲ್ಸನ್ ಸೀಕ್ವೆಲ್ ತೆರೆಗೆ ತರ್ತಿದ್ದಾರೆ. 'ಜೈಲರ್- 3' ಕೂಡ ಬರುತ್ತೆ ಎನ್ನುವ ಊಹಾಪೋಹ ಶುರುವಾಗಿದೆ.
ಒಂದೇ ಕಥೆಯನ್ನು ಎರಡು ಭಾಗಗಳಲ್ಲಿ ಹೇಳುವ ಟ್ರೆಂಡ್ ನಡೀತಿದೆ. ಆದರೆ ಒಂದು ಸಿನಿಮಾ ಮುಗಿದ ಬಳಿಕ ಮತ್ತೊಂದು ಭಾಗ ಮಾಡುವುದಾಗಿ ಹೇಳಿ ಸುಳಿವು ಕೊಟ್ಟು ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಕೊಡುವ ಲೆಕ್ಕಾಚಾರ ಕೂಡ ಶುರುವಾಗಿದೆ. 'ಕೆಜಿಎಫ್- 2' ಕೊನೆಯಲ್ಲಿ ಪಾರ್ಟ್- 3 ಬಗ್ಗೆ ಕುತೂಹಲ ಮೂಡಿಸಿ ಸಣ್ಣ ಸುಳಿವು ಕೊಟ್ಟಿದ್ದರು. ಶಿವರಾಜ್‌ಕುಮಾರ್ ನಟನೆಯ 'ಬೇಲ್' ಚಿತ್ರದ ಕೊನೆಯಲ್ಲಿ ಕೂಡ ಸೀಕ್ವೆಲ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.
'ಜೈಲರ್- 2' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕೂಡ ಇಂಥದ್ದೇ ಟ್ವಿಸ್ಟ್ ಕೊಟ್ಟು ಮತ್ತೊಂದು ಭಾಗ ಮಾಡುವ ಆಲೋಚನೆ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಸೀಕ್ವೆಲ್ ಮಾಡ್ತಾರೋ ಬಿಡ್ತಾರೋ ಕೊನೆಯಲ್ಲಿ ಇಂತಾದೊಂದು ಟ್ವಿಸ್ಟ್ ಅಭಿಮಾನಿಗಳಿಗೆ ಕಿಕ್ ಕೊಡಲಿದೆ. ಈ ಹಿಂದೆ ಬಾಷಾ ಸೀಕ್ವೆಲ್ ಹಾಗೂ 'ಪೇಟಾ' ಸೀಕ್ವೆಲ್ ಮಾಡುವಂತೆ ರಜನಿಕಾಂತ್ ಅವರನ್ನು ಕೇಳಿದ್ದರಂತೆ. ಆದರೆ ನನಗೆ ಅದು ಇಷ್ಟವಿಲ್ಲ ಎಂದುಬಿಟ್ಟಿದ್ದರಂತೆ. ಮೊದಲ ಭಾಗದಲ್ಲಿ ಹೇಳಿದ್ದನ್ನೇ ಮತ್ತಷ್ಟು ಮಸಾಲೆ ಹಾಕಿ ಹೇಳುವುದು ಬೇಡ ಎಂದುಬಿಟ್ಟಿದ್ದರಂತೆ. ಆದರೆ ಓಟಿಟಿಯಲ್ಲಿ 'ಜೈಲರ್' ಸಿನಿಮಾ ನೋಡಿ ಸೀಕ್ವೆಲ್ ನೋಡಿದ ಮೇಲೆ ತಮ್ಮ ನಿರ್ಧಾರ ಬದಲಿಸಿದ್ದಾಗಿ ತಲೈವಾ ಹೇಳಿದ್ದಾರೆ.
ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ವಿಲನ್ ವರ್ಮಾ "ನಾನು ನಿನ್ನನ್ನು ಬಿಡುವುದಿಲ್ಲ" ಎನ್ನುವ ಡೈಲಾಗ್ ಇದೆ. ಜೊತೆಗೆ ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಟೈನರ್ ಸಂಗಿತಿಯಿದೆ. ಅದನ್ನೆಲ್ಲಾ ಸೇರಿಸಿ ಪಾರ್ಟ್ - 2 ಮಾಡಲು ಕಥೆಯಿದೆ ಎಂದು ಅನ್ನಿಸಿದ ಬಳಿಕ ಅದಕ್ಕೆ ಒಪ್ಪಿದರಂತೆ. ಇದೀಗ 'ಜೈಲರ್' ಕಥೆಯನ್ನು ಮತ್ತೊಂದು ಭಾಗಕ್ಕೆ ಮುಂದುವರೆಸುತ್ತಾರಾ ಕಾದು ನೋಡಬೇಕಿದೆ.
'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಶಿವಣ್ಣ, ಮ್ಯಾಥ್ಯೂ ಆಗಿ ಮೋಹನ್ ಲಾಲ್ ಅಬ್ಬರಿಸಿದ್ದಾರೆ. ಸೀಕ್ವೆಲ್‌ನಲ್ಲಿ ಅವರಿಬ್ಬರ ಪಾತ್ರವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಹಾಗಾಗಿ ಪಾರ್ಟ್ - 2 ಗೆದ್ರೆ ಪಾರ್ಟ್ 3 ಕೂಡ ಬರುವ ಸಾಧ್ಯತೆಯಿದೆ. ಒಟ್ಟಾತೆ ಈ ಸುದ್ದಿ ಕೇಳಿ ಸೂಪರ್ ಸ್ಟಾರ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.