'ಟಾಕ್ಸಿಕ್' ಆಯ್ತು 'ರಾಮಾಯಣ-1' ಕೂಡ ತೆರೆಗೆ ಬಂದಾಯ್ತು. 2028ರಲ್ಲಿ 'ರಾಮಾಯಣ' ಸೀಕ್ವೆಲ್ ಬರಬೇಕಿದೆ. ಅದು ಬಿಟ್ಟು ಯಶ್ ಮುಂದಿನ ಸಿನಿಮಾ ಯಾವ್ದು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಅಭಿಮಾನಿಗಳಲ್ಲಿದೆ. 'ಕೆಜಿಎಫ್- 3' ಘೋಷಣೆ ಆಗಿದ್ದರೂ ಸದ್ಯಕ್ಕೆ ಬರಲ್ಲ ಎನ್ನುವುದು ಗೊತ್ತಾಗ್ತಿದೆ.

ಯಶ್ ಈಗ ನಿರ್ಮಾಪಕ, ಸಿನಿಮಾ ಬರಹಗಾರ ಕೂಡ ಆಗಿಬಿಟ್ಟಿದ್ದಾರೆ. ಹಾಗಾಗಿ ಸುಖಾಸುಮ್ಮನೆ ಯಾರೋ ಹೇಳಿದ ಕಥೆಯನ್ನು ಒಪ್ಪಿ ಸಿನಿಮಾ ಮಾಡುವವರಲ್ಲ. ಪ್ರತಿ ಸಿನಿಮಾ ಮಾಡಲು ಸಾವಿರ ಬಾರಿ ಯೋಚಿಸುತ್ತಾರೆ. 'ಕೆಜಿಎಫ್- 2' ಮುಗಿದ ಬಳಿಕ ಎರಡು ವರ್ಷ ಸಮಯ ತಗೊಂಡು 'ಟಾಕ್ಸಿಕ್' ಸ್ಕ್ರಿಪ್ಟ್ ಫೈನಲ್ ಮಾಡಿದ್ದರು. ತಾವೇ ನಿರ್ಮಾಪಕರಾಗಿ ಕೈಜೋಡಿಸಿದ್ದು ಮಾತ್ರವಲ್ಲ, ಕಥೆ, ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದರು.

'ಟಾಕ್ಸಿಕ್' ಸಿನಿಮಾ ನೋಡಿ ಬಾಲಿವುಡ್ ನಿರ್ದೇಶಕ ಆದಿತ್ಯಧರ್ ಮೆಚ್ಚಿದ್ದರು. ಹಾಗಾಗಿ ಯಶ್ ಹಾಗೂ ಆದಿತ್ಯಧರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಬಹುದು ಎನ್ನುವ ಚರ್ಚೆ ಶುರುವಾಗಿದೆ. 'ಧುರಂಧರ್' ಸರಣಿ ಬಳಿಕ ಆದಿತ್ಯಧರ್ ಕೂಡ ಯಾವುದೇ ಸಿನಿಮಾ ಘೋಷಿಸಿಲ್ಲ. ಚಾಣಕ್ಯ ಹಾಗೂ ಚಂದ್ರಗುಪ್ತ ಮೌರ್ಯ ಕಥೆಯನ್ನು ಅವರು ತೆರೆಗೆ ತರಲು ಮನಸ್ಸು ಮಾಡಿದ್ದಾರೆ. ಯಶ್ ಜೊತೆ ರಣ್‌ವೀರ್ ಸಿಂಗ್ ಕೂಡ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಗುಸುಗುಸು ಇದೀಗ ಶುರುವಾಗಿದೆ.

ಆದರೆ ಆದಿತ್ಯಧರ್ ಹೇಳಿದ ಸ್ಕ್ರಿಪ್ಟ್ ಅನ್ನು ಯಶ್ ರಿಜೆಕ್ಟ್ ಮಾಡಿದ್ದಾರೆ ಎನ್ನುವ ಮತ್ತೊಂದು ವದಂತಿ ಹರಿದಾಡ್ತಿದೆ. ಹಾಗಾದ್ರೆ ಮತ್ಯಾರ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ ಮಾಡ್ತಾರೆ? ಎನ್ನುವ ಪ್ರಶ್ನೆ ಮತ್ತೆ ಗರಿಗೆದರಿದೆ. ತಮಿಳಿನ ಪಿ.ಎಸ್ ಮಿತ್ರನ್ ಸೇರಿ ಕೆಲ ನಿರ್ದೇಶಕರು ಯಶ್ ಅವರಿಗೆ ಕಥೆ ಹೇಳಿದ್ದಾರೆ. ಕೆಲವನ್ನು ಮೆಚ್ಚಿದ್ದಾರೆ. ಆದರೆ ಮುಂದಿನ ಚಿತ್ರಕ್ಕೆ ಯಾವುದನ್ನು ಆಯ್ಕೆ ಮಾಡಿಕೊಳ್ತಾರೆ ಎನ್ನುವುದು ಮಾತ್ರ ಗೊತ್ತಿಲ್ಲ. ಯಶ್ ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು ಎನ್ನುವುದು ಪ್ರೇಕ್ಷಕರ ಬೇಡಿಕೆ.

ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟದಲ್ಲಿ ಯಶ್ ನಿಧಾನ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕಾಗಿ 3 ವರ್ಷ ವ್ಯಯಿಸಿ ಸೋತಿದ್ದು ಗೊತ್ತೇಯಿದೆ. ಮತ್ತೆ ಆ ರೀತಿ ಆಗುವುದು ಬೇಡ. ವರ್ಷಕ್ಕೆ ಒಂದಾದರೂ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದೆಲ್ಲಾ ಯಶ್‌ ಅವರಿಗೂ ಗೊತ್ತಿರುವ ವಿಚಾರವೇ.. ಆದರೂ ಮುಂದೇನು ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.