ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ನಟಿ ಉಮಾಶ್ರೀ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಇವತ್ತಿಗೂ ರಂಜಿಸುತ್ತಿದ್ದಾರೆ. ಒಂದ್ಕಾಲದಲ್ಲಿ ಹಾಸ್ಯನಟಿಯಾಗಿ ಗುರ್ತಿಸಿಕೊಂಡಿದ್ದ ಅವರು ಬಳಿಕ ಗಂಭೀರ ಪಾತ್ರಗಳಲ್ಲಿ ಕೂಡ ನಟಿಸಿ ಸಕ್ಸಸ್‌ ಕಂಡರು. 'ಪುಟ್ನಂಜ' ಚಿತ್ರದ ಪುಟ್ಮಲ್ಲಿ ಪಾತ್ರವನ್ನು ಜನ ಮರೆಯೋಕೆ ಸಾಧ್ಯವಿಲ್ಲ.

'ಪುಟ್ನಂಜ' ಚಿತ್ರದಲ್ಲಿ ನಟಿಸುವಾಗ ಉಮಾಶ್ರೀ ಅವರಿಗೆ 38 ವರ್ಷ ವಯಸ್ಸಾಗಿತ್ತು. ಆದರೆ ಚಿತ್ರದಲ್ಲಿ ವಯಸ್ಸಾದ ಮುದುಕಿಯ ಪಾತ್ರದಲ್ಲಿ ಬಣ್ಣ ಹಚ್ಚಿ ಮೋಡಿ ಮಾಡಿದ್ದರು. ಆ ಗೆಟಪ್, ಭಾಷೆ ಎಲ್ಲವೂ ಅಜ್ಜಿಯೇ ನಟಿಸಿದಂತಿತ್ತು. ಅತ್ಯುತ್ತಮ ಪೋಷಕ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಉಮಾಶ್ರೀ ಮಾತನಾಡಿದ್ದಾರೆ. ತಮ್ಮ ಸಿನಿಜೀವನದ ಸಾಕಷ್ಟು ವಿಚಾರಗಳನ್ನು ಮೆಲುಕು ಹಾಕಿದ್ದಾರೆ. ಕೈತುಂಬಾ ಸಂಭಾವನೆ ವಿಚಾರ ಬಂದಾಗ 'ಪುಟ್ನಂಜ' ಚಿತ್ರದ ಹೆಸರು ಹೇಳಿದ್ದಾರೆ.

ಇಡೀ ಚಿತ್ರಕ್ಕೆ ಆಗ 75 ಸಾವಿರ ರೂ. ಸಂಭಾವನೆ ಕೊಟ್ಟಿದ್ದರು. ಆ ಕಾಲಕ್ಕೆ ಅದು ದೊಡ್ಡ ಮೊತ್ತ. ನಾನು ಆಗ ಹೆಚ್ಚು ಖರ್ಚು ಮಾಡುತ್ತಿರಲಿಲ್ಲ. ಮಕ್ಕಳಿಗಾಗಿ ಹಣವನ್ನು ಕೂಡಿ ಇಡುತ್ತಿದ್ದೆ. 'ಪುಟ್ನಂಜ' ಚಿತ್ರದ ಸಂಭಾವನೆ ಹಣವನ್ನು ಅದೇ ರೀತಿ ಎತ್ತಿಟ್ಟಿದ್ದೆ. ಸಾವಿರ, ಎರಡು ಸಾವಿರ ರೂ. ಸೀರೆ ಬೇಡವೇ ಬೇಡ ಎನ್ನುತ್ತಿದ್ದೆ. ಇನ್ನೂರು ಮುನ್ನೂರು ರೂ. ಸೀರೆ ತಗೊಂಡು ಉಡುತ್ತಿದ್ದೆ. ನಮ್ಮ ಮಕ್ಕಳನ್ನು ಅದೇ ರೀತಿ ಸಾಕಿದ್ದೀನಿ. ನಾನು ಹಾಕ್ಕೊಂಡು ಬಿಟ್ಟ ಬಟ್ಟೆ ಮಗಳು ಹಾಕಿಕೊಳ್ತಿದ್ಲು ಎಂದು ಉಮಾಶ್ರೀ ಹೇಳಿದ್ದಾರೆ.

ಅಂದಹಾಗೆ 'ಪುಟ್ನಂಜ' ಚಿತ್ರವನ್ನು ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಿರ್ಮಿಸಿ ನಿರ್ದೇಶನ ಮಾಡಿದ್ದರು. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬಂದಿತ್ತು. ಚಿತ್ರದ ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. 'ಪುಟ್ನಂಜ' ಆಗಿ ರವಿಚಂದ್ರನ್, ಪುಟ್ಮಲ್ಲಿ ಆಗಿ ಉಮಾಶ್ರೀ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ರಂಗಭೂಮಿ ಹಿನ್ನೆಲೆಯಿಂದ ಬಂದ ಉಮಾಶ್ರೀ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುತ್ತಾರೆ. ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ತಿಲ್ಲ. ಒಳ್ಳೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವರ್ಷ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ಕೂಡ ಅದ್ಭುತವಾಗಿ ನಟಿಸಿ ಗಮನ ಸೆಳೆದಿದ್ದಾರೆ.

ಸಾಹುಕಾರ್ ಜಾನಕಿ, ಕಾಂಚನಾ, ಶಾಂತಮ್ಮ, ಲೀಲಾವತಿ ರೀತಿಯ ಖ್ಯಾತ ನಟಿಯರನ್ನು ಕರೆಸಿ ಪುಟ್ಮಲ್ಲಿ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಮಾಡಿಸಿದ್ದರು. ಆದರೆ ಯಾರು ಕೂಡ ಸೂಕ್ತ ಎನಿಸಿರಲಿಲ್ಲ. ಬಿ. ಸುರೇಶ ಸಲಹೆ ಮೇರೆಗೆ ಉಮಾಶ್ರೀ ಅವರಿಗೆ ಸ್ಕ್ರೀನ್ ಟೆಸ್ಟ್ ಮಾಡಿದ್ದರು. ಮೊದಲಿಗೆ ಇದು ಗಂಭೀರ ಪಾತ್ರ, ಹಾಗಾಗಿ ಉಮಾಶ್ರೀ ಬೇಡ ಎಂದು ರವಿಚಂದ್ರನ್ ಹೇಳಿಬಿಟ್ಟಿದ್ದರಂತೆ. ಕೊನೆಗೆ ಬಿ. ಸುರೇಶ ಹಠಕ್ಕೆ ಬಿದ್ದು ಉಮಾಶ್ರೀ ಅವರನ್ನು ಕರೆಸಿ, ಮೇಕಪ್ ಮಾಡಿಸಿ ಒಂದು ಡಮ್ಮಿ ದೃಶ್ಯವನ್ನು ಚಿತ್ರೀಕರಿಸಿ ತೋರಿಸಿದ ಬಳಿಕ ರವಿಚಂದ್ರನ್ ಇಷ್ಟಪಟ್ಟು ಫೈನಲ್ ಮಾಡಿದ್ದರು. ಮುಂದೆ ಪುಟ್ಮಲ್ಲಿ ಪಾತ್ರದಲ್ಲಿ ಉಮಾಶ್ರೀ ಜಾದೂ ಮಾಡಿದ್ದು ಗೊತ್ತೇಯಿದೆ.