ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ' ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಬಹಳ ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರಲಾಗ್ತಿದೆ. ಈಗಾಗಲೇ ಟೀಸರ್, ಸಾಂಗ್ಸ್ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕೆಲವರು ಟೀಕಿಸಲು ಆರಂಭಿಸಿದ್ದಾರೆ. ಬಾಲಿವುಡ್ ನಟ ಮುಖೇಶ್ ಖನ್ನಾ ಈಗ ಪ್ರತಿಕ್ರಿಯಿಸಿದ್ದಾರೆ.

ಹಾಲಿವುಡ್ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಬಹಳ ದೊಡ್ಡಮಟ್ಟದಲ್ಲಿ 'ರಾಮಾಯಣ' ಸಿನಿಮಾ ಕಟ್ಟಿಕೊಡಲಾಗಿದೆ. ಬ್ಲೂ ಮ್ಯಾಟ್‌ನಲ್ಲಿ ಬಹುತೇಕ ಚಿತ್ರೀಕರಣದ ನಡೆಸಿ ಬಳಿಕ ಗ್ರಾಫಿಕ್ಸ್ ಮೂಲಕ ಹೊಸ ಪ್ರಪಂಚ ಸೃಷ್ಟಿಸಲಾಗಿದೆ. ಇನ್ನು ಶ್ರೀರಾಮನಾಗಿ ರಣ್‌ಬೀರ್ ಕಪೂರ್ ನಟಿಸಿದ್ದಾರೆ. ಆದರೆ ರಾಮನನ್ನು ನೀವು ಸಲ್ಮಾನ್ ಖಾನ್, ರಜನಿಕಾಂತ್ ಮಾಡಿಬಿಟ್ಟಿದ್ದೀರಾ ಎಂದು ಮುಖೇಶ್ ಖನ್ನಾ ಬೇಸರ ವ್ಯಕ್ತಪಡಿಸಿದ್ದಾರೆ.

ಮರ್ಯಾದ ಪುರುಷೋತ್ತಮ ರಾಮನನ್ನು ಸೂಪರ್ ಹೀರೊ ರೀತಿ ತೋರಿಸಿದ್ದಾರೆ. ಜೊತೆಗೆ ಗ್ರಾಫಿಕ್ಸ್ ಕೂಡ ಚೆನ್ನಾಗಿಲ್ಲ ಎಂದು 'ಶಕ್ತಿಮಾನ್' ನಟ ಹೇಳಿರುವುದು ವೈರಲ್ ಆಗ್ತಿದೆ. 'ರಾಮಾಯಣ' ಟ್ರೈಲರ್ ನೋಡಿ ತಮಗೆ ಏನು ಅನಿಸಿತು ಎನ್ನುವುದನ್ನು ಅವರು ವಿವರಿಸಿದ್ದಾರೆ. Bollywood Now ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಶ್ರೀರಾಮನನ್ನು 'ಧುರಂಧರ್' ರೀತಿ ಮಹಾನ್ ಯೋಧನ ರೀತಿ ಚಿತ್ರಿಸಲಾಗಿದೆ.

ಶ್ರೀರಾಮನು ದೈವಿಕ ವ್ಯಕ್ತಿ.. ದೇವರ ಅವತಾರ ಆದರೂ ಚಿತ್ರದಲ್ಲಿ ತೋರಿಸಿರುವ ಯುದ್ಧದ ದೃಶ್ಯವು 'ರಾಮಾಯಣ'ದಲ್ಲಿನ ಚಿತ್ರಣಕ್ಕೆ ಅನುಗುಣವಾಗಿಲ್ಲ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ. ಅದರಲ್ಲೂ ಶ್ರೀರಾಮನು ಮರವನ್ನು ಹತ್ತಿ ಬಾಣಗಳನ್ನು ಬಿಡುವ ದೃಶ್ಯದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಕಾರಣ ರಾಮಾಯಣದಲ್ಲಿ ಅಂತಹ ದೃಶ್ಯ ಕಂಡುಬರುವುದಿಲ್ಲ. ನೀವು ಶ್ರೀರಾಮನನ್ನು ಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ರಜನಿಕಾಂತ್ ಮಾಡಿಬಿಟ್ಟಿದ್ದೀರಾ" ಎಂದಿದ್ದಾರೆ.

ಶ್ರೀರಾಮ ಮರ್ಯಾದ ಪುರುಷೋತ್ತಮ. ಹಸನ್ಮುಖಿ ಆಗಿರುತ್ತಿದ್ದ ರಾಮ ಸಮುದ್ರದ ಮುಂದೆ ಕೈಮುಗಿದು ಸೇತುವೆ ಕಟ್ಟಲು ಅನುವು ಮಾಡಿಕೊಡು ಎಂದು ಕೇಳಿಕೊಂಡಿದ್ದ. ಆದರೆ ನೀವು ಶ್ರೀರಾಮನನ್ನು ಆಕ್ಷನ್ ಹೀರೊ ರೀತಿ ಬಿಂಬಿಸಿದರೆ ಹೇಗೆ. ಒಂದು ವೇಳೆ ರಾಮ ಹೀಗೆ ಹೋರಾಡುವಂತೆ ಇದ್ದರೆ ಆತನಿಗೆ ವಾನರ ಸೇನೆಯ ಸಹಾಯ ಬೇಕಿರಲಿಲ್ಲ ಎಂದು ಮುಖೇಶ್ ಖನ್ನಾ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಗ್ರಾಫಿಕ್ಸ್ ಕೂಡ ಅತಿಯಾಯ್ತು. ನೈಜತೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಮೊದಲ ಭಾಗ ಈ ದೀಪಾವಳಿಗೆ ಬಂದ್ರೆ, ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗಪ್ಪಳಿಸಲಿದೆ.