ಡಾ. ರಾಜ್‌ಕುಮಾರ್ ನಟನೆಯ ಬಹುತೇಕ ಸಿನಿಮಾಗಳು ಸಕ್ಸಸ್ ಕಂಡಿತ್ತು. ಅದರಲ್ಲೂ ಲಕ್ಷ್ಮಿ ಜೊತೆ ನಟಿಸಿದ 'ನಾ ನಿನ್ನ ಮರೆಯಲಾರೆ' ಸಿನಿಮಾ ಮರೆಯೋಕೆ ಸಾಧ್ಯವಿಲ್ಲ. ವಿಜಯ್ ನಿರ್ದೇಶನದ ಚಿತ್ರವನ್ನು ಎನ್. ವೀರಸ್ವಾಮಿ ನಿರ್ಮಾಣ ಮಾಡಿದ್ದರು. ಸೆಪ್ಟೆಂಬರ್ 10, 1976ರಲ್ಲಿ ತೆರೆಕಂಡ ಸಿನಿಮಾ ಸರಿಯಾಗಿ 50 ವರ್ಷ ಪೂರೈಸಿದೆ. ಈ ಕ್ಲಾಸಿಕ್ ಚಿತ್ರವನ್ನು ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ.

ಎ. ಆರ್ ಆನಂದ್ ಬರೆದ 'ನಾನು ನೀನು ಜೋಡಿ' ಕಾದಂಬರಿ ಆಧರಿಸಿ ಚಿ. ಉದಯಶಂಕರ್ ಚಿತ್ರಕಥೆ ಬರೆದಿದ್ದರು. ಲೀಲಾವತಿ, ಬಾಲಕೃಷ್ಣ, ಲೋಕನಾಥ್, ಸಂಪತ್, ಶುಭ ತಾರಾಗಣದಲ್ಲಿದ್ದರು. ರಾಜನ್‌- ನಾಗೇಂದ್ರ ಸಂಗೀತದ 'ನಾ ನಿನ್ನ ಮರೆಯಲಾರೆ' ಸಿನಿಮಾ ಗೀತೆಗಳನ್ನು ಮರೆಯೋಕೆ ಸಾಧ್ಯವಿಲ್ಲ. 'ನನ್ನಾಸೆಯ ಹೂವೆ', 'ಎಲ್ಲೆಲ್ಲಿ ನಾ ನೋಡಲಿ', 'ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು' ಜೊತೆಗೆ ಟೈಟಲ್ ಸಾಂಗ್ ಸೇರಿ ಎಲ್ಲವೂ ಹಿಟ್ ಆಗಿತ್ತು.

ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯಾ ಈ ಸಿನಿಮಾ ರೀಮೆಕ್ ಮಾಡುವ ಕನಸು ಕಂಡಿದ್ದರು. ಅಂದರೆ ಆ ಚಿತ್ರವನ್ನು ರೀ-ಕ್ರಿಯೇಟ್ ಮಾಡುವ ಪ್ರಯತ್ನ ಅದಾಗಿತ್ತು. ಪುನೀತ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಡಾರ್ಲಿಂಗ್ ಕೃಷ್ಣ ಈ ವಿಚಾರವನ್ನು ಹೇಳಿದ್ದರು. ಆದರೆ ಅಪ್ಪು ಅಗಲಿಕೆಯಿಂದ ಅದು ಕನಸಾಗಿಯೇ ಉಳಿಯಿತು. ನಟಿ ರಮ್ಯಾ ಕೂಡ ಈ ವಿಚಾರವಾಗಿ ಪುನೀತ್ ತಮ್ಮ ಬಳಿ ಮಾತನಾಡಿದ್ದನ್ನು ನೆನಪಿಸಿಕೊಂಡಿದ್ದರು.

'ನಾ ನಿನ್ನ ಮರೆಯಲಾರೆ' ಚಿತ್ರದಲ್ಲಿ ಅಣ್ಣಾವ್ರು ಜಾವಾ ಬೈಕ್ ಬಳಸಿದ್ದರು. ಕ್ಲೈಮ್ಯಾಕ್ಸ್‌ ಸನ್ನಿವೇಶದಲ್ಲಿ ಬೆಟ್ಟಗುಡ್ಡದ ಮೇಲೆ ಡಾ. ರಾಜ್ ಬೈಕ್ ಏರಿ ಬರುವ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ದಶಕಗಳ ಕಾಲ ರಸ್ತೆಗಳಲ್ಲಿ ಬಹಳ ಸದ್ದು ಮಾಡಿದ್ದ ಜಾವಾ ಬೈಕ್ ದಿಢೀರನೆ ಕಣ್ಮರೆ ಆಗಿತ್ತು. 2018ರಲ್ಲಿ ಹೊಸ ರೂಪದಲ್ಲಿ ಜಾವಾ ಬೈಕ್‌ ರೀ-ಲಾಂಚ್ ಆಗಿತ್ತು. ಆಗ 'ನಾ ನಿನ್ನ ಮರೆಯಲಾರೆ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಪ್ರಚಾರಕ್ಕಾಗಿ ಜಾವಾ ಕಂಪನಿ ಬಳಸಿಕೊಂಡಿತ್ತು.

15.11.18 ರಂದು ಜಾವಾ ಬೈಕ್ ವಾಪಸ್ ಬರುವುದಕ್ಕೆ ನಾವು ಕಾಯುತ್ತಿರುವಾಗ, ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವ ವಿಷಯ ಇಲ್ಲಿದೆ. 'ನಾ ನಿನ್ನ ಮರೆಯಲಾರೆ' ಚಿತ್ರದ ಈ ಅದ್ಭುತ ದೃಶ್ಯವನ್ನು ನೋಡಿ ಆನಂದಿಸಿ ಎಂದು ಜಾವಾ ಮೋಟರ್ ಸೈಕಲ್ಸ್ ಸಂಸ್ಥೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಅಷ್ಟರಮಟ್ಟಿಗೆ ಚಿತ್ರದಲ್ಲಿ ಅಣ್ಣಾವ್ರು ಜಾವಾ ಬೈಕ್ ಚಲಾಯಿಸುವುದು ಗಮನ ಸೆಳೆದಿತ್ತು.

ತಮಿಳು ಹಾಗೂ ಹಿಂದಿ ಭಾಷೆಗಳಿಗೆ ರೀಮೆಕ್ ಆಗಿದ್ದ 'ನಾ ನಿನ್ನ ಮರೆಯಲಾರೆ' ಸಿನಿಮಾ ಮಲಯಾಳಂ ಭಾಷೆಗೆ ಡಬ್ ಆಗಿತ್ತು. ಅಷ್ಟರಮಟ್ಟಿಗೆ 50 ವರ್ಷಗಳ ಹಿಂದೆ ಈ ಸಿನಿಮಾ ಸದ್ದು ಮಾಡಿತ್ತು.