ಇವತ್ತಿಗೆ ಸರಿಯಾಗಿ 36 ವರ್ಷದ ಹಿಂದೆ ಕರುನಾಡಿಗೆ ಆ ಕಾರು ಅಪಘಾತದ ಸುದ್ದಿ ಬಂದೆರಗಿತ್ತು. ಶಂಕರ್ ನಾಗ್ ಇನ್ನಿಲ್ಲ ಎನ್ನುವ ಆ ಸುದ್ದಿಯನ್ನು ಇವತ್ತಿಗೂ ಸಾಕಷ್ಟು ಜನರಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗ್ತಿಲ್ಲ. ಅದೊಂದು ಕಾರಿನ ಪ್ರಯಾಣ ಶಂಕ್ರಣ್ಣನನ್ನು ಬಾರದಲೋಕಕ್ಕೆ ಪಯಣಿಸುವಂತೆ ಮಾಡಿಬಿಟ್ಟಿತ್ತು. ತಮ್ಮ 35ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದರು. ಇವತ್ತು ಇದ್ದಿದ್ರೆ ಅವರಿಗೆ 72 ವರ್ಷ ವಯಸ್ಸಾಗಿ ಇರುತ್ತಿತ್ತು. ಶಂಕರ್ ನಾಗ್ ದೂರದೃಷ್ಟಿಯಿಂದ ಕರ್ನಾಟಕ ರಾಜ್ಯ ಉತ್ತುಂಗದ ಸ್ಥಾನದಲ್ಲಿ ಕಾಣಬಹುದಿತ್ತು.
1990ರ ಸೆಪ್ಟೆಂಬರ್ 30. ದಾವಣಗೆರೆಯ ಆನಗೋಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ - 04ರಲ್ಲಿ ನಡೆದ ಕಾರು ಅಪಘಾತದಲ್ಲಿ ಶಂಕರ್ ನಾಗ್ ನಿಧನರಾಗಿದ್ದರು. ಹಿಂದಿನ ದಿನ ರಾತ್ರಿ 'ಜೋಕುರಸ್ವಾಮಿ' ಸಿನಿಮಾದ ಪೂಜೆಗಾಗಿ ಬೆಂಗಳೂರಿನಿಂದ ಬಾಗಲಕೋಟೆಯ ಲೋಕಾಪುರಕ್ಕೆ ಪತ್ನಿ ಅರುಂಧತಿ ನಾಗ್, ಮಗಳು ಕಾವ್ಯ ಜೊತೆ ಅವರು ಹೊರಟ್ಟಿದ್ದರು. ಬೆಳಗಿನ ಜಾವ 4:30ಕ್ಕೆ ನಡೆದ ಈ ಭೀಕರ ಅಪಘಾತದಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದಿತ್ತು. ಮುಂಭಾಗದಲ್ಲಿ ಕುಳಿತಿದ್ದ ಡ್ರೈವರ್ ಲಿಂಗಣ್ಣ ಹಾಗೂ ಶಂಕ್ರಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಅರುಂಧತಿ ನಾಗ್ ಹಾಗೂ ಮಗಳು ಗಾಯಗೊಂಡಿದ್ದರು.
ಶಂಕರ್ ನಾಗ್ ಅಂದ್ರೆ ಸಮಯ. ಶಂಕರ್ ನಾಗ್ ಅಂದ್ರೆ ಕೆಲಸ ಕೆಲಸ ಕೆಲಸ.. "ಸತ್ತಾಗ ಮಲಗುವುದು ಇದ್ದೆ ಇದೆ. ಬದುಕಿದ್ದಾಗ ಏನನ್ನಾದರೂ ಸಾಧಿಸು" ಎನ್ನುತ್ತಿದ್ದರು. ಒಂದು ನಿಮಿಷ ಕೂಡ ಸುಮ್ಮನೆ ಕೂತು ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಯಾರಿಗೂ ಕಾಯುತ್ತಿರಲಿಲ್ಲ. ಎಲ್ಲದರಲ್ಲೂ ವೇಗ, ಒಂಥರಾ ಶಂಕರ್ ನಾಗ್ ಜೀವನವೇ 'ಮಿಂಚಿನ ಓಟ'. ಸಿನಿಮಾ ಚಿತ್ರಕರಣದ ವೇಳೆ ಒಂದು ಗಂಟೆ ವಿರಾಮ ಇದೆ ಎಂದು ಗೊತ್ತಾದರೆ ಅಲ್ಲಿ ಕೂರದೇ ಎದ್ದು ಹೊರಟುಬಿಡುತ್ತಿದ್ದರು. ಯಾವುದೋ ಕೆಲಸದ ಮೇಲೆ ಯಾರನ್ನೋ ಭೇಟಿ ಮಾಡಿ ಬಂದುಬಿಡುತ್ತಿದ್ದರು. ಸರಿಯಾದ ಸಮಯಕ್ಕೆ ಕಾರು ಬರದಿದ್ದರೆ ಕಾಯದೇ ಆಟೋ ಏರಿ ಹೊರಟುಬಿಡುತ್ತಿದ್ದರು.
ಎಲ್ಲೋ ಒಂದು ಕಡೆ ಇದೇ ವೇಗ ಅವರನ್ನು ಅಷ್ಟು ಬೇಗ ನಮ್ಮಿಂದ ದೂರ ಆಗುವಂತೆ ಮಾಡಿಬಿಡ್ತು ಎನಿಸುತ್ತದೆ. ಶಂಕ್ರಣ್ಣನ ಕೆಲ ಆಪ್ತರು ಇವತ್ತಿಗೂ ಇದನ್ನು ನೆನಪಿಸಿಕೊಳ್ಳುತ್ತಾರೆ. ಶಂಕರ್ ನಾಗ್ ಜೀವನದಲ್ಲಿ ಮಾಡಿದ ಒಂದು ತಪ್ಪು ಅದೇ ಅನಿಸುತ್ತದೆ. ಅವರ ವೇಗ ಹೇಗಿರುತ್ತಿತ್ತು ಅಂದ್ರೆ ಜೊತೆಗಿದ್ದವರು ಹೈರಾಣಾಗಿಬಿಡುತ್ತಿದ್ದರು. ಆದ್ರೆ ಅವರು ಮಾತ್ರ ಎಂದಿಗೂ ಸಾಕಪ್ಪ, ಕೊಂಚ ವಿಶ್ರಾಂತಿ ಪಡೆಯೋಣ ಎನ್ನುತ್ತಿರಲಿಲ್ಲ. ನೀನು ಬರದಿದ್ದರೆ ನಾನು ಹೋಗ್ತೀನಿ, ನೀನು ಮಾಡದಿದ್ದರೆ ಆ ಕೆಲಸ ನಾನೇ ಮಾಡಿಬಿಡ್ತೀನಿ ಎನ್ನುತ್ತಿದ್ದ ಜಾಯಮಾನ ಅವರದ್ದು.
1980ರ ದಶಕದಲ್ಲೇ ಬೆಂಗಳೂರಿಗೆ ನಮ್ಮ ಮೆಟ್ರೋ ರೀತಿಯ ರಸ್ತೆ ಸಾರಿಗೆ ವ್ಯವಸ್ಥೆ ಎಂದು ಶಂಕರ್ ನಾಗ್ ಯೋಚಿಸಿದ್ದರು. ಅದಕ್ಕಾಗಿ ವಿದೇಶಕ್ಕಾಗಿ ಅಲ್ಲಿನ ಮೆಟ್ರೋ ರೈಲು ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರದ ಮುಂದಿಟ್ಟಿದ್ದರು. ಕಡಿಮೆ ವೆಚ್ಚದಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡುವುದು, ನಂದಿ ಬೆಟ್ಟದ ರೋಪ್‌ವೇ ಹೀಗೆ ನಾನಾ ಯೋಜನೆಗಳ ಕನಸು ಕಂಡಿದ್ದರು ಶಂಕ್ರಣ್ಣ. ಇವತ್ತು ಅವರು ಇದ್ದಿದ್ರೆ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ರು, ಅಥವಾ ಯಾವುದಾದರೂ ಉನ್ನತ ಸ್ಥಾನದಲ್ಲಿ ಇರುತ್ತಿದ್ರು ಎಂದು ಅಭಿಮಾನಿಗಳು ಭಾವಿಸುತ್ತಾರೆ.
ಕ್ಯಾಮರಾ ಸಮಸ್ಯೆಯಿಂದ ಲೋಕಾಪುರದಲ್ಲಿ 'ಜೋಕುರಸ್ವಾಮಿ' ಸಿನಿಮಾ ಚಿತ್ರೀಕರಣ ಎರಡು ದಿನ ಮುಂದೂಡಲಾಗಿತ್ತು. ಈ ವಿಚಾರ ಶಂಕರ್ ನಾಗ್‌ಗೆ ಗೊತ್ತಾಗಿದ್ದಿದ್ದರೆ ಅವತ್ತು ಲೋಕಾಪುರಕ್ಕೆ ಪ್ರಯಾಣ ಬೆಳೆಸುತ್ತಿರಲಿಲ್ಲ, ಈ ಅಪಘಾತ ಸಂಭವಿಸುತ್ತಿರಲಿಲ್ಲ ಎಂದು ಆಪ್ತ ಸ್ನೇಹಿತ ಜಗದೀಶ್ ಮಲ್ನಾಡ್ ಹೇಳ್ತಿರೆ. ಅಂದು ಬೆಳಗ್ಗೆ ಸಿನಿಮಾ ಮಹೂರ್ತ ಪೂಜೆಗೆ ಹೋಗಬೇಕು ಎಂದು ಹೊರಟ್ಟಿದ್ದ ಶಂಕರ್ ನಾಗ್ ಅಪಘಾತದಲ್ಲಿ ಕೊನೆಯುಸಿರೆಳಿಯುವಂತಾಯ್ತು. ಅವತ್ತು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸದೇ ಇದ್ದಿದ್ದರೂ ಆಗ್ತಿತ್ತು. ಪೂಜೆ ಬಳಿಕ ನಿಧಾನವಾಗಿ ಹೋಗಿ ಚಿತ್ರೀಕರಣದಲ್ಲಿ ಭಾಗವಹಿಸಬಹುದಿತ್ತು ಎನ್ನುತ್ತಾರೆ. ಒಟ್ಟಾರೆ ಇವತ್ತಿಗೂ ಆಪ್ತರು, ಅಭಿಮಾನಿಗಳು ಶಂಕ್ರಣ್ಣನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.