ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ಮಿಸಿ ನಿರ್ದೇಶಿಸಿ ನಟಿಸಿದ್ದ 'ಶಾಂತಿ ಕ್ರಾಂತಿ' ಸಿನಿಮಾ 30 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಅವತ್ತಿನ ಕಾಲಕ್ಕೆ ಅದು ಹೊಸ ಪ್ರಯೋಗವಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಇತ್ತೀಚೆಗೆ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಅದೇ ರೀತಿ 'ಶಾಂತಿ ಕ್ರಾಂತಿ' ಸಿನಿಮಾ ಮತ್ತೆ ತೆರೆಗೆ ತರಬೇಕು. ನಾವು ಸಿನಿಮಾ ನೋಡಿ ಗೆಲ್ಲಿಸ್ತೀವಿ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

'ಶಾಂತಿ ಕ್ರಾಂತಿ' ಸಿನಿಮಾ ರೀ-ರಿಲೀಸ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೀತು. ದೊಡ್ಡಮಟ್ಟದಲ್ಲಿ ಈ ಬಗ್ಗೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಸಿನಿಮಾ ಮತ್ತೆ ತೆರೆಗೆ ತರುವುದು ಅಷ್ಟು ಸುಲಭ ಅಲ್ಲ ಎಂದು ಕ್ರೇಜಿಸ್ಟಾರ್ ಸಹೋದರ ಬಾಲಾಜಿ ಹೇಳಿದ್ದರು. ಚಿತ್ರದ ನೆಗೆಟಿವ್ ಲಭ್ಯವಿಲ್ಲ. ನಾವು ಪ್ರಯತ್ನ ಮಾಡ್ತಿದ್ದೀವಿ. ಮುಂದೆ ನೋಡೋಣ ಎಂದಿದ್ದರು. ಇದೇ ವಿಚಾರದ ಬಗ್ಗೆ ಇದೀಗ ರವಿಚಂದ್ರನ್ ಪ್ರತಿಕ್ರಿಯಿಸಿದ್ದಾರೆ. 'ಫಾದರ್ಸ್ ಪ್ರೀಮಿಯರ್ ಲೀಗ್' ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿ ಈ ಬಗ್ಗೆ ಮಾತನಾಡಿದ್ದಾರೆ.

ಸದ್ಯ 'ಶಾಂತಿ ಕ್ರಾಂತಿ' ಚಿತ್ರದ ಹಕ್ಕು ನನ್ನ ಸಹೋದರನ ಬಳಿಯಿದೆ. ರೀ-ರಿಲೀಸ್ ಬಗ್ಗೆ ಅವನು ಯೋಚಿಸಬೇಕು. ಮತ್ತೊಂದು ಸಮಸ್ಯೆ ಏನಂದ್ರೆ ಚಿತ್ರದ ನೆಗೆಟಿವ್ ಈಗ ಇಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ. "ಆಗ ಗೇವಾ ನೆಗೆಟಿವ್ ಅಂತ ಮಾಡಿದ್ರು. 25 ವರ್ಷಗಳು ಕಳೆಯುತ್ತಿದ್ದಂತೆ ನೆಗೆಟಿವ್ ಕರಗಿ ಹೋಗಿದೆ. ಸಾಕಷ್ಟು ಸಿನಿಮಾಗಳ ನೆಗೆಟಿವ್ ಹೀಗೆ ಆಗಿದೆ. ಅದು ಯಾರಿಗೂ ಗೊತ್ತಾಗಲಿಲ್ಲ. ಅರಿವಿಗೆ ಬರುವ ವೇಳೆಗೆ ಎಲ್ಲಾ ನಾಶ ಆಗಿತ್ತು. ಆದರೆ ಇವತ್ತಿನ ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಬಹುದು. ಯಾರಾದರೂ ಹಳೇ ಪ್ರಿಂಟ್ ಇಟ್ಕೊಂಡಿದ್ರೆ, ತಂದು ಕೊಟ್ರೆ ಮತ್ತೆ ತೆರೆಗೆ ತರುವ ಪ್ರಯತ್ನ ಮಾಡಬಹುದು. ಅದಕ್ಕೆ ಸಮಯ ಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.

ಆ ಚಿತ್ರವನ್ನು ತೆರೆಗೆ ತೆರಬೇಕು ಅಂದ್ರೆ, ಎರಡ್ಮೂರು ಕೋಟಿ ರೂಪಾಯಿ ಬೇಕು ಎಂದು ರವಿಚಂದ್ರನ್ ಮಾಹಿತಿ ನೀಡಿದ್ದಾರೆ. ಆ ಮ್ಯೂಸಿಕ್ ಮತ್ತೆ ಕಟ್ಟಿಕೊಡಬೇಕು, ಆರ್ಕೇಸ್ಟ್ರಾ ಮಾಡಬೇಕು. ಅವತ್ತಿಗೆ ದೊಡ್ಡ ಆರ್ಕೇಸ್ಟ್ರಾ. 10 ಕೋಟಿ ಬಜೆಟ್ ಆಗಿತ್ತು ಎಂದು ಕೆಲವರು ಹೇಳ್ತಾರೆ. ಅದೆಲ್ಲಾ ಏನಿಲ್ಲ ಪ್ರತಿದಿನ 6 ಲಕ್ಷ ರೂ. ಅವತ್ತಿಗೆ ಖರ್ಚಾಗಿತ್ತು. ಹೀಗೆ 300 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೆವು. ಪ್ರತಿದಿನ 3000 ಸಾವಿರ ಮಕ್ಕಳು ಚಿತ್ರೀಕರಣದಲ್ಲಿ ಇರ್ತಿದ್ರು. ಇವತ್ತು ಕೂಡ ಅದನ್ನೆಲ್ಲಾ ಮಾಡುವುದು ಕಷ್ಟ. ಆ ಮಕ್ಕಳಿಗೆ ಇವತ್ತು ಥ್ಯಾಂಕ್ಸ್ ಹೇಳ್ತೀನಿ ಎಂದು ರವಿಚಂದ್ರನ್ ಆ ಸಿನಿಮಾ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅವತ್ತು ಜನ ಸಿನಿಮಾ ನೋಡ್ಲಿಲ್ಲ ಎಂದು ನನಗೆ ಬೇಸರವಾಗಿಲ್ಲ. ಜನ ಮೆಚ್ಚುವಂತಹ ಸಿನಿಮಾ ಮಾಡೋಕೆ ಸಾಧ್ಯವಾಗಲಿಲ್ಲ ಎನ್ನುವ ಕೊರಗು ನನಗಿದೆ. ಆ ಸೋಲಿನಿಂದ ಹೊರಬರಲು ನಾನು ಬೇರೆ ಬೇರೆ ಸಿನಿಮಾಗಳನ್ನು ಮಾಡುವಂತಾಯಿತು ಎಂದು ಕ್ರೇಜಿಸ್ಟಾರ್ ಅಂತರಾಳ ಬಿಚ್ಚಿಟ್ಟಿದ್ದಾರೆ. ಈಗ 'I Am God' ಎಂಬ ಸಿನಿಮಾ ಮಾಡ್ತಿದ್ದೀನಿ. ಇದು ಬಹಳ ವಿಭಿನ್ನವಾದ ಪ್ರಯತ್ನ ಎಂದು ಅವರು ತಿಳಿಸಿದ್ದಾರೆ. ಒಟ್ಟಾರೆ 'ಶಾಂತಿ ಕ್ರಾಂತಿ' ಸಿನಿಮಾ ರೀ-ರಿಲೀಸ್ ಅಭಿಮಾನಿಗಳು ಅಂದುಕೊಂಡಷ್ಟು ಸುಲಭ ಅಲ್ಲ ಎನ್ನುವುದು ಗೊತ್ತಾಗುತ್ತಿದೆ.

1991ರಲ್ಲಿ 4 ಭಾಷೆಗಳಲ್ಲಿ 'ಶಾಂತಿ ಕ್ರಾಂತಿ' ಸಿನಿಮಾ ನಿರ್ಮಾಣವಾಗಿತ್ತು. ಒಂದೇ ಕಥೆಯಲ್ಲಿ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹಿರೋಗಳು ನಟಿಸಿದ್ದರು. ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ ಅದಾಗಿತ್ತು. ಕನ್ನಡದಲ್ಲಿ ರವಿಚಂದ್ರನ್ ಹೀಗೆ ಆಗಿದ್ದರೆ ತೆಲುಗಿನಲ್ಲಿ ನಾಗಾರ್ಜುನ, ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್ ಹೀರೊ ಆಗಿ ಅಬ್ಬರಿಸಿದ್ದರು. ಹಂಸಲೇಖ ಸಂಗೀತದಲ್ಲಿ ಚಿತ್ರದ ಆಲ್ಬಮ್ ಹಿಟ್ ಆಗಿತ್ತು. ಆ ಹಾಡುಗಳನ್ನು ಜನ ಇನ್ನು ಮರೆತ್ತಿಲ್ಲ.