ಯಶ್ ನಟನೆಯ 'ಟಾಕ್ಸಿಕ್' ಸಿನಿಮಾವನ್ನು ಪ್ರೇಕ್ಷಕರು ಮರೆತು ಮುಂದು ಹೋಗುತ್ತಿದ್ದಾರೆ. ಮುಂದೇನು ಎಂದು ಕೇಳಲು ಆರಂಭಿಸಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈ ಪೌರಾಣಿಕ ಚಿತ್ರಕ್ಕೆ ಎರಡು ಸಿನಿಮಾಗಳು ಪೈಪೋಟಿ ಕೊಡಲಿವೆ.
ಹಾಲಿವುಡ್ ಅಂಗಳದಲ್ಲಿ ಕೂಡ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. ಅಕ್ಟೋಬರ್ ಕೊನೆ ವಾರದಲ್ಲಿ ನಿತೇಶ್ ತಿವಾರಿ ನಿರ್ದೇಶನದ ಸಿನಿಮಾ ತೆರೆಗಪ್ಪಳಿಸಲಿದೆ. ನವೆಂಬರ್ ಮೊದಲ ವಾರದಲ್ಲಿ 'ಗಾಡ್ಜಿಲ್ಲಾ ಮೈನಸ್ ಜೀರೊ' ಸಿನಿಮಾ ಅಖಾಡಕ್ಕಿಳಿಯಲಿದೆ. ಜಪಾನ್ ದೇಶದಲ್ಲಿ ನಿರ್ಮಾಣವಾಗಿರುವ ಈ ಮಾನ್‌ಸ್ಟರ್ ಸಿನಿಮಾ ಹಾಲಿವುಡ್ ಅಂಗಳದಲ್ಲೂ ಸದ್ದು ಮಾಡಲಿದೆ.
'ಗಾಡ್ಜಿಲ್ಲಾ ಮೈನಸ್ ಜೀರೊ' ಜೊತೆಗೆ ನಯನತಾರ ನಟನೆಯ 'ಮೂಕುಟ್ಟಿ ಅಮ್ಮನ್- 2' ಸಿನಿಮಾ ಕೂಡ ಬೆಳಕಿನ ಹಬ್ಬಕ್ಕೆ ಕಳೆ ತರಲಿದೆ. ಸುಂದರ್ ಸಿ ನಿರ್ದೇಶನದ ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ಬಣ್ಣ ಹಚ್ಚಿದ್ದಾರೆ. ಯೋಗಿ ಬಾಬು, ಗರುಡ ರಾಮ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ಆದರೆ ಈ ಸಿನಿಮಾ ಜೊತೆಗೆ ಆಕೆ ನಟಿಸಿದ್ದ 'ಹಾಯ್' ಅನ್ನೋ ತಮಿಳು ಸಿನಿಮಾ ಕೂಡ ತೆರೆಗೆ ಬಂದಿತ್ತು. ಈಗ 'ರಾಮಾಯಣ' ಎದುರು 'ಮೂಕುಟ್ಟಿ ಅಮ್ಮನ್- 2' ದರ್ಬಾರ್ ನಡೆಯಲಿದೆ.
6 ವರ್ಷಗಳ ಹಿಂದೆ 'ಮೂಕುಟ್ಟಿ ಅಮ್ಮನ್' ಸಿನಿಮಾ ತೆರೆಗೆ ಬಂದು ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿತ್ತು. 'ರಾಮಾಯಣ' ರೀತಿಯ ಪೌರಾಣಿಕ ಸಿನಿಮಾ ಎದುರು ಭಕ್ತಿ ಪ್ರಧಾನ 'ಮೂಕುಟ್ಟಿ ಅಮ್ಮನ್' ಚಿತ್ರ ಬಿಡುಗಡೆ ಆಗುತ್ತಿರುವುದು ವಿಶೇಷ. ಸಿನಿಮಾ ಚೆನ್ನಾಗಿದ್ದರೆ ಯಾವುದೇ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಹೆದರುವ ಅವಶ್ಯಕತೆ ಇಲ್ಲ. ಎರಡೂ ಸಿನಿಮಾ ಚೆನ್ನಾಗಿದ್ದರೆ ಎರಡಕ್ಕೂ ಜನ ನೋಡ್ತಾರೆ. 'ಟಾಕ್ಸಿಕ್' ಎದುರು ತೆಲುಗಿನ 'ಇರುಮುಡಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ.
'ಮೂಕುಟ್ಟಿ ಅಮ್ಮನ್'- 2 ಸಿನಿಮಾ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆ ಆಗಿಲ್ಲ. 'ರಾಮಾಯಣ' ಸಿನಿಮಾ ಪ್ರಚಾರವನ್ನು ಚಿತ್ರತಂಡ ಆರಂಭಿಸಿಲ್ಲ. 'ಟಾಕ್ಸಿಕ್' ಗದ್ದಲ ಕಮ್ಮಿ ಆದ್ಮೇಲೆ ಪ್ರಚಾರ ಶುರು ಮಾಡುವ ನಿರೀಕ್ಷೆಯಿದೆ. ಅದಕ್ಕೂ ಮುನ್ನ ಯಶ್ ತಮ್ಮ ಅಭಿಮಾನಿಗಳನ್ನು ಭೇಟಿ ಆಗ್ತಾರೆ ಎನ್ನಲಾಗ್ತಿದೆ.