ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಸೌಂದರ್ಯ ಶೆಟ್ಟಿ ಆರ್ಭಟ ಜೋರಾಗಿದೆ. ಪುರುಷ ಸ್ಪರ್ಧಿಗಳಿಗೆ ಪೈಪೋಟಿ ಕೊಟ್ಟು ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮಂಗಳೂರು ಮೂಲದ ಸೌಂದರ್ಯ ದೊಡ್ಮನೆಯಲ್ಲಿ ಸ್ಯಾಂಡಿ ಎಂದೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆ ಆಕೆಗೆ ಇದು ಮೊದಲ ರಿಯಾಲಿಟಿ ಶೋ ಅಲ್ಲ.
ಹಿಂದಿಯ ಜನಪ್ರಿಯ 'MTV ಸ್ಪ್ಲಿಟ್ಸ್ವಿಲ್ಲಾ ಸೀಸನ್ 16' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸೌಂದರ್ಯ ಫಿನಾಲೆವರೆಗೂ ಹೋಗಿದ್ದರು. ಜೋಡಿ ಟೇನ್ ಡಿ ವಿಲಿಯರ್ಸ್ ಜೊತೆ ಸೇರಿ ಮೂರನೇ ರನ್ನರ್ ಅಪ್ ಎನಿಸಿಕೊಂಡಿದ್ದರು. 2019ರಲ್ಲಿ 'ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್' ಕಿರೀಟ ಕೂಡ ಮುಡಿಗೇರಿಸಿಕೊಂಡಿದ್ದರು. ಸ್ಪ್ಲಿಟ್ಸ್ವಿಲ್ಲಾ ಶೋ ವೇಳೆ ಸೌಂದರ್ಯ ತಮ್ಮ ಬಾಡಿ ಕೌಂಟ್ ಹೇಳಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.
ಸಹ ಸ್ಪರ್ಧಿ ದೀಪ್ತಾಂಶು ಸೈನಿ ಜೊತೆ ಸೇರಿ ಸೌಂದರ್ಯ ಮಾತನಾಡಿದ್ದರು. ಈ ವೇಳೆ ಬಾಡಿ ಕೌಂಟ್ ಪ್ರಶ್ನೆ ಪರಸ್ಪರ ಕೇಳಿಕೊಂಡಿದ್ದರು. ದೀಪ್ತಾಂಶು ತಮ್ಮ ಬಾಡಿ ಕೌಂಟ್ 5 ಎಂದು ಹೇಳಿದ್ರೆ, ಸ್ಯಾಂಡಿ ತಮ್ಮ ಬಾಡಿ ಕೌಂಟ್ 2 ಎಂದಿದ್ದರು. ಇಬ್ಬರ ಜೊತೆ 8 ವರ್ಷ ರಿಲೇಷನ್ಶಿಪ್ನಲ್ಲಿದ್ದೆ. ಹಾಗಾಗಿ 2 ಅಷ್ಟೇ ಎಂದು ಆಕೆ ಹೇಳಿದ್ದರು. ಸದ್ಯ ಕನ್ನಡ ಬಿಗ್ಬಾಸ್ ಶೋನಲ್ಲಿ ಸೌಂದರ್ಯ ಗಮನ ಸೆಳೆಯುತ್ತಿದ್ದಂತೆ ಈ ವೀಡಿಯೋ ವೈರಲ್ ಆಗ್ತಿದೆ. ಇದೇ ವೀಡಿಯೋ ತೋರಿಸಿ ಕೆಲವರು ಸ್ಯಾಂಡಿ ಅಭಿಮಾನಿಗಳ ಕಾಲೆಳೆಯುತ್ತಿದ್ದಾರೆ.
ಮಾಡೆಲ್, ಡ್ಯಾನ್ಸರ್ ಆಗಿರುವ ಸೌಂದರ್ಯ ಕಂಟೆಂಟ್ ಕ್ರಿಯೇಟರ್ ಆಗಿ ಕೂಡ ಗುರ್ತಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗೆ ಗಂಧರ್ವರು ಮತ್ತು ರಾಕ್ಷಸರ ಟಾಸ್ಕ್ ವೇಳೆ ಮಾಡ್ರನ್ ಮಹಾಕವಿ ಮಂಜನಿಗೆ ಸೌಂದರ್ಯ ಶೆಟ್ಟಿ ಸೆಡ್ಡು ಹೊಡೆದಿದ್ದರು. ರಣಚಂಡಿಯಂತೆ ಅಬ್ಬರಿಸಿದ್ದರು. ತಾಕತ್ತಿದ್ದರೇ ಗೇಮ್ ಬಗ್ಗೆ ಮಾತ್ನಾಡೋ, ನೆಟ್ಟಗೆ ಒಂದು ಗೇಮ್ ಆಡೋಕೆ ಬರಲ್ಲ, ಇಲ್ಲಿ ಮಾತ್ನಾಡ್ತಾನೆ. ಮನುಷ್ಯತ್ವ ಕಲಿತುಕೊಂಡು ಬಾ... ಎಂದು ತಿರುಗೇಟು ನೀಡಿದ್ದರು. ಮೊದಲಿನಿಂದಲೂ ತಮ್ಮ ರೋಷಾವೇಶದ ಆಟದಿಂದಲೇ ಸ್ಯಾಂಡಿ ದೊಡ್ಮನೆ ಒಳಗೆ ಸದ್ದು ಮಾಡುತ್ತಿದ್ದಾರೆ.