ತೆಲುಗಿನ 'ರಣಬಾಲಿ' ಸಿನಿಮಾ ಈ ವಾರ ತೆರೆಕಂಡು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೂ ದಸರಾ ಸಂಭ್ರಮದಲ್ಲಿ ಸಿನಿಮಾ ಸದ್ದು ಮಾಡುವ ನಿರೀಕ್ಷೆಯಿದೆ. ನಿರೀಕ್ಷಿತ ಮಟ್ಟದಲ್ಲಿ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ನಡೆದಿರಲಿಲ್ಲ. ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗುತ್ತಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿರುವುದು ಚಿತ್ರಕ್ಕೆ ಕ್ರೇಜ್ ತಂದಿದೆ.

ಬ್ರಿಟೀಷರ ಕಾಲದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ರಾಹುಲ್ ಸಂಕೀರ್ತ್ಯನ್ 'ರಣಬಾಲಿ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. 'ಜೈಲರ್- 2' ಆರ್ಭಟದ ನಡುವೆ ಕೂಡ ಸಿನಿಮಾ ಸದ್ದು ಮಾಡಲು ಆರಂಭಿಸಿದೆ. ಫಸ್ಟ್ ಹಾಫ್ ಓಕೆ ಪರವಾಗಿಲ್ಲ, ಆದ್ರೆ ಸೆಕೆಂಡ್ ಹಾಫ್ ಸಿನಿಮಾ ತಾಳ್ಮೆ ಪರೀಕ್ಷೆ ಮಾಡುತ್ತದೆ ಎಂದು ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಕೂಡ ಚರ್ಚೆ ಜೋರಾಗಿದೆ.

ಬಾಕ್ಸಾಫೀಸ್ ಕಲೆಕ್ಷನ್

ಮೊದಲ ದಿನ 'ರಣಬಾಲಿ' ಸಿನಿಮಾ 16.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಭಾರತದಲ್ಲಿ 9.25 ಕೋಟಿ ರೂ. ನೆಟ್ ಕಲೆಕ್ಷನ್ ಸೇರಿ ಒಟ್ಟು 10.75 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದೆ ಎನ್ನುವ ಮಾತಗಳು ಕೇಳಿಬರ್ತಿದೆ. ಓವರ್‌ ಸೀಸ್‌ ಮಾರ್ಕೆಟ್‌ನಲ್ಲಿ 5.75 ಕೋಟಿ ರೂ. ಸೇರಿ ವಿಶ್ವದಾದ್ಯಂತ ಸಿನಿಮಾ ಮೊದಲ ದಿನ 16 ಕೋಟಿ ರೂ.ಗೂ ಅಧಿಕ ಕಲೆಕ್ಷನೆ ಮಾಡಿರುವುದಾಗಿ ಅಂದಾಜಿಸಲಾಗ್ತಿದೆ.

ಕರ್ನಾಟಕದಲ್ಲಿ ಡಲ್

ಸದ್ಯ ರಾಜ್ಯದಲ್ಲಿ 'ಪ್ರೇಮದ ಊರಲಿ' ಸಿನಿಮಾ ಆರ್ಭಟ ಜೋರಾಗಿದೆ. ಜೊತೆಗೆ ರಜನಿಕಾಂತ್ ನಟನೆಯ 'ಜೈಲರ್- 2' ದರ್ಬಾರ್ ನಡೀತಿದೆ. ಈ ಎರಡೂ ಸಿನಿಮಾಗಳ ನಡುವೆ 'ರಣಬಾಲಿ' ಚಿತ್ರ ಡಲ್ ಆಗಿದೆ. ಬೆಂಗಳೂರಿನಲ್ಲಿ ಕೊಂಚಮಟ್ಟಿಗೆ ಜನ ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಿರುವುದು ಅಡ್ವಾನ್ಸ್ ಬುಕ್ಕಿಂಗ್ ನೋಡಿದ್ರೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ವಿಜಯ್ -ರಶ್ಮಿಕಾ ಜೋಡಿ ಸಿನಿಮಾ ಹೇಗೆ ಸದ್ದು ಮಾಡುತ್ತೆ ಕಾದು ನೋಡಬೇಕಿದೆ.