ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ರಣಬಾಲಿ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ರಾಹುಲ್ ಸಂಕೀರ್ತ್ಯನ್ ನಿರ್ದೇಶನದ ಐತಿಹಾಸಿಕ ಕಥಾಹಂದರದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಸ್ವತಂತ್ರ್ಯಪೂರ್ವ ಭಾರತದಲ್ಲಿ ಬ್ರಿಟೀಷರ ಅಟ್ಟಹಾಸ, ಅವರನ್ನು ಎದುರಿಸಿದವರ ನೋವಿನ ಕಥೆ ಇಲ್ಲಿದೆ.

ಸದ್ಯ 'ರಣಬಾಲಿ' ಸಿನಿಮಾ ಟ್ರೈಲರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಮೈತ್ರಿ ಮೂವಿಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸಿಂಗನಮಲ ಬೊಬ್ಬಿಲಿ ರಣಬಾಲಿಯಾಗಿ ವಿಜಯ್ ದೇವರಕೊಂಡ ಅಬ್ಬರಿಸಿದ್ದಾರೆ. ರಕ್ತಕ್ಕೆ ರಕ್ತ ಎಂದು ಬ್ರಿಟೀಷರ ವಿರುದ್ಧ ಸಮರ ಸಾರಿದ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಭಾರತೀಯರನ್ನು ಬ್ರಿಟೀಷರು ಎಷ್ಟು ಹೀನವಾಗಿ ನಡೆಸಿಕೊಳ್ಳುತ್ತಿದ್ರು ತಿರುಗಿ ಬಿದ್ದವರನ್ನು ಹೇಗೆ ದಂಡಿಸುತ್ತಿದ್ರು ಎನ್ನುವುದನ್ನು ಎಳೆಎಳೆಯಾಗಿ ಕಟ್ಟಿಕೊಡಲಾಗಿದೆ. ಅಂತಿಮವಾಗಿ ಬ್ರಿಟೀಷರಿಗೆ ರಣಬಾಲಿ ಹೇಗೆ ಸಿಂಹಸ್ವಪ್ನ ಆಗುತ್ತಾನೆ ಎನ್ನುವುದರ ಝಲಕ್ ಟ್ರೈಲರ್‌ನಲ್ಲಿದೆ.

ರಣಬಾಲಿಯ ಪತ್ನಿ ಜಯಮ್ಮ ಆಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಜಯಮ್ಮ ಅಂದ್ರೆ ಮೊದ ಮೊದಲು ಉರಿದುಬೀಳುವ ರಣಬಾಲಿ ಬಳಿಕ ಆಕೆಯ ಪ್ರೀತಿಗೆ ಕರಗಿ ಹೇಗೆ ಬದಲಾಗುತ್ತಾನೆ ಎನ್ನುವುದನ್ನು ನೋಡಬಹುದು. 1854ರಿಂದ 1878ರ ನಡುವೆ ದೇಶದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಆಧರಿಸಿ ಚಿತ್ರವನ್ನು ತೆರೆಗೆ ತರಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ 'ರಣಬಾಲಿ' ಸಿನಿಮಾ ಬಿಡುಗಡೆ ಆಗಲಿದೆ.

ರಾಯಲಸೀಮೆ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಅದಕ್ಕೆ ತಕ್ಕಂತೆ ಭಾಷೆ ಕಲಿತು ವಿಜಯ್ ನಟಿಸಿದ್ದಾರೆ. ದೇಹವನ್ನು ಹುರಿಗೊಳಿಸಿ ಬಹಳ ಖಡಕ್ ಆಗಿ ದರ್ಶನ ಕೊಟ್ಟಿದ್ದಾರೆ. ಮೀಸೆ ತಿರುವು ಬ್ರಿಟೀಷರ ಎದುರು ತೊಡೆ ತಟ್ಟಿದ್ದಾರೆ. ಅಜಯ್- ಅತುಲ್ ಸಂಗೀತ ಚಿತ್ರಕ್ಕಿದೆ. ಅಕ್ಟೋಬರ್ 16ರಂದು ಸಿನಿಮಾ ತೆರೆಗೆ ಬರಲಿದೆ.