ಬ್ರಿಟೀಷರ ಆಳ್ವಿಕೆ ಕಾಲಘಟ್ಟದಲ್ಲಿ ಭಾರತೀಯ ಸ್ಥಿತಿ ಹೇಗಿತ್ತು? ಜನರನ್ನು ಅವರು ಹೇಗೆಲ್ಲಾ ಹಿಂಸಿಸುತ್ತಿದ್ದರು ಎನ್ನುವುದನ್ನು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಅಂಥದ್ದೇ ಕಥೆ ಆಧರಿಸಿ ಈ ವಾರ 'ರಣಬಾಲಿ' ಸಿನಿಮಾ ಬಿಡುಗಡೆಯಾಗಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿರುವುದು ಮೂರನೇ ಸಿನಿಮಾ ಇದು. ಮದುವೆ ಬಳಿಕ ಜೊತೆಯಾಗಿರುವ ಮೊದಲ ಸಿನಿಮಾ. ಹಾಗಾಗಿ ನಿರೀಕ್ಷೆ ಹೆಚ್ಚಿತ್ತು. ಸತತ ಸೋಲಿನಿಂದ ಕಂಗೆಟ್ಟ ವಿಜಯ್ ಈ ಬಾರಿ ಬಹಳ ಶ್ರಮವಹಿಸಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂತಿಮವಾಗಿ ಸಿನಿಮಾ ತೆರೆಗೆ ಬಂದಿದೆ. ಅಷ್ಟಕ್ಕೂ ಸಿನಿಮಾ ಕಥೆ ಏನು? ಯಾರು ಪರ್ಫಾರ್ಮೆನ್ಸ್ ಹೇಗಿದೆ? ಇಲ್ಲಿದೆ ರಿವ್ಯೂ ರಿಪೋರ್ಟ್.

ಕಥೆ

ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಅಂದ್ರೆ 1876-78ರ ಅವಧಿಯಲ್ಲಿ ನಡೆಯುವ ಕಥೆ ಇದು. ಆ ಕಾಲಘಟ್ಟದಲ್ಲಿ ದಕ್ಷಿಣ ಭಾರತದಲ್ಲಿ ಭೀಕರ ಬರಗಾಲ ಬಂದು ಹಾಹಾಕಾರ ಶುರುವಾಗಿತ್ತು. ಅಂತಹ ಸಮಯದಲ್ಲಿ ಕೂಡ ಬ್ರಿಟೀಷರ ಉಪಟಳ ಅಟ್ಟಹಾಸ ಕಮ್ಮಿ ಆಗಿರಲಿಲ್ಲ. ತಿನ್ನಲು ಅನ್ನ ಇಲ್ಲದ ಕಾಲದಲ್ಲಿ ಇಲ್ಲಿ ಬೆಳೆದಿದ್ದನ್ನು ಬ್ರಿಟನ್ ದೇಶಕ್ಕೆ ಸಾಗಿಸಬೇಕು ಎಂದು ಮದ್ರಾಸ್ ಪ್ರೆಸಿಡೆನ್ಸಿ ಹಠಕ್ಕೆ ಬೀಳುತ್ತದೆ. ಹೊಸದಾಗಿ ಬಂದ ಕಮೀಷನರ್(ಅರ್ನಾಡ್ ವೆಸ್ಲೂ) ಆಳ್ವಿಕೆಯಲ್ಲಿ ಜನರ ಮೇಲೆ ಕ್ರೌರ್ಯ ಹೆಚ್ಚಾಗುತ್ತದೆ. ಸಿಂಗನಮಲ ಪ್ರಾಂತ್ಯದ ರಣಬಾಲಿ(ವಿಜಯ್ ದೇವರಕೊಂಡ) ಬ್ರಿಟೀಷರ ವಿರುದ್ಧ ತಿರುಗಿ ಬೀಳ್ತಾನೆ.

ಅಂತಹ ಬರಗಾಲದ ಸಮಯದಲ್ಲಿ ಹಸಿವಿನಿಂದ ಎಷ್ಟೋ ಜನ ಸಾಯುತ್ತಾರೆ. ಬ್ರಿಟಿಷರ ನಿಯಂತ್ರಣದಲ್ಲಿರುವ ಧಾನ್ಯವನ್ನು ಜನರಿಗೆ ಹಂಚಲು ರಣಬಾಲಿ ಹೋರಾಟ ಮಾಡುತ್ತಾನೆ. ಈ ಹೋರಾಟಕ್ಕೆ ಪತ್ನಿ ಜಯಮ್ಮ(ರಶ್ಮಿಕಾ ಮಂದಣ್ಣ) ಬೆಂಬಲವಾಗಿ ನಿಲ್ಲುತ್ತಾಳೆ. ಅಷ್ಟಕ್ಕೂ ರಣಬಾಲಿ ಹಿನ್ನೆಲೆ ಏನು? ಆತನ ಆಯಸ್ಸು ಕಮ್ಮಿ ಯಾಕೆ ? ಬ್ರಿಟೀಷರನ್ನು ಹಿಮ್ಮೆಟ್ಟಿಸಲು ಆತ ನಡೆಸುವ ಯುದ್ಧ ಎಂಥದ್ದು ಎನ್ನುವುದನ್ನು ತೆರೆಮೇಲೆ ನೋಡಬೇಕು.

ಸಿನಿಮಾ ಹೇಗಿದೆ ?

ನೈಜ ಘಟನೆಗಳ ಹಿನ್ನೆಲೆಯಲ್ಲಿ ಒಂದಷ್ಟು ಕಾಲ್ಪನಿಕ ಕಥೆಗಳನ್ನು ಸೇರಿಸಿ ಸಿನಿಮಾ ಮಾಡುವ ಪ್ರಯತ್ನ ಕೆಲವೊಮ್ಮೆ ನಡೆಯುತ್ತದೆ. ಅದೇ ರೀತಿ ಸಮಯದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಭೀಕರ ಬರಗಾಲ ಬಂದು ಸಾಕಷ್ಟು ಸಾವು ನೋವು ಸಂಭವಿಸಿತ್ತು. ಅಂತಹ ಸಮಯದಲ್ಲಿ ಕೂಡ ಬ್ರಿಟೀಷರು ದೋಚುವುದನ್ನು ಮಾತ್ರ ನೋಡಿದ್ದರು. ತಿರುಗಿ ಬಿದ್ದವರನ್ನು ಕೊಂದಿದ್ದರು. ಇದೇ ಅಂಶಗಳನ್ನು ಇಟ್ಟುಕೊಂಡು ರಾಹುಲ್ ಸಂಕೇರ್ತನ್ 'ರಣಬಾಲಿ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅವರ ಕಲ್ಪನೆ ಹಾಗೂ ಪ್ರಯತ್ನವನ್ನು ಮೆಚ್ಚಲೇಬೇಕು. ಆದರೆ ಒಂದು ಸಿನಿಮಾ ಆಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ 'ರಣಬಾಲಿ' ಅಷ್ಟಾಗಿ ಸಫಲವಾಗಿಲ್ಲ.

ಕಥೆ ಬಹಳ ಸಿಂಪಲ್.. ಅದು ಟ್ರೈಲರ್‌ನಲ್ಲೇ ಗೊತ್ತಾಗಿ ಹೋಗಿತ್ತು. ಇನ್ನು ಸಿನಿಮಾದಲ್ಲಿ ಮುಂದೇನು ಆಗುತ್ತದೆ ಎನ್ನುವುದು ಗೊತ್ತಾಗುತ್ತಾ ಹೋಗುತ್ತೆ. ಹಾಗಾಗಿ ಕುತೂಹಲ ಉಳಿಯುವುದಿಲ್ಲ. ರಣಬಾಲಿ ಹುಟ್ಟಿನೊಂದಿಗೆ ಸಿನಿಮಾ ಆರಂಭವಾಗುತ್ತದೆ. ಫಸ್ಟ್‌ ಹಾಫ್‌ನಲ್ಲಿ ವಿಜಯ್ ಎಂಟ್ರಿ ಕಿಕ್ ಕೊಡುತ್ತೆ. ಇನ್ನು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ನಡೆಯುವ ಕ್ರೌರ್ಯ, ಭಾರತೀಯರ ನೋವು ಎಲ್ಲವನ್ನು ಕಣ್ಣಿಗೆ ಕಟ್ಟಿದಂತೆ ಹೇಳಲಾಗಿದೆ. ವಿಜಯ್-ರಶ್ಮಿಕಾ ಕೆಮೆಸ್ಟ್ರಿ ಕೂಡ ಸೊಗಸಾಗಿದೆ. ಒಟ್ಟಾರೆ ಅರ್ಧ ಸಿನಿಮಾ ಓಕೆ ಓಕೆ ಎನಿಸಿಕೊಳ್ಳುತ್ತೆ.

ಸೆಕೆಂಡ್ ಹಾಫ್ ಆರಂಭ ವೇಗವಾಗಿ ಇದ್ದರೂ ಬಳಿಕ ಸಿನಿಮಾ ನೋಡುಗರ ತಾಳ್ಮೆ ಪರೀಕ್ಷೆ ಮಾಡುತ್ತದೆ. ನಿರೂಪಣೆ ನಿಧಾನ ಮಾತ್ರವಲ್ಲದೇ ಕೆಲ ಸನ್ನಿವೇಶ ಪುನರಾವರ್ತನೆಯಾಗಿ ಬೇಸರ ಮೂಡಿಸುತ್ತದೆ. ಆದರೂ ಗುಹೆಯಲ್ಲಿ ಆಕ್ಷನ್ ಸನ್ನಿವೇಶ ಕಿಕ್ ಕೊಡುತ್ತೆ. ಇನ್ನು ವಿಜಯ್ ದೇವರಕೊಂಡ ಕೋಳಿ ಕುತ್ತಿಗೆಗೆ ಬಾಯಿ ಹಾಕಿ ಕಚ್ಚುವುದು ಸೇರಿದಂತೆ ಕೆಲವೆಡೆ ಕ್ರೌರ್ಯ ಅತಿಯಾಯ್ತು ಎನಿಸದೇ ಇರದು. ಸಾಕಷ್ಟು ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು.

ಪಾತ್ರವರ್ಗ- ತಂತ್ರಜ್ಞರು

ನಟನೆ ವಿಚಾರಕ್ಕೆ ಬಂದರೆ ವಿಜಯ್ ಒಳ್ಳೆ ಅಂಕ ಗಿಟ್ಟಿಸಿಕೊಳ್ತಾರೆ. ಆದರೆ ಅವರ ನಟನೆಗೆ ಬೇಕಾದ ಚಿತ್ರಕಥೆ ಸಿಕ್ಕಿಲ್ಲ. ದೇಹವನ್ನು ಹುರಿಗೊಳಿಸಿ ಬಹಳ ರಗಡ್ ಅವತಾರದಲ್ಲಿ ಅವರು ದರ್ಶನ ಕೊಟ್ಟಿದ್ದಾರೆ. ಇನ್ನು ಜಯಮ್ಮ ಆಗಿ ರಶ್ಮಿಕಾ ಕೂಡ ಮೋಡಿ ಮಾಡುತ್ತಾರೆ. 'ಏಂದಯ್ಯ ಸಾಮಿ' ಹಾಡು ಅಭಿಮಾನಿಗಳಿಗೆ ಹಬ್ಬ ಎನ್ನುವಂತಿದೆ. ಒಂದು ಸಣ್ಣ ಅಂಶವನ್ನಿಟ್ಟುಕೊಂಡು ಎರಡೂವರೆ ಗಂಟೆ ಸಿನಿಮಾ ಮಾಡಲು ಯತ್ನಿಸಿರುವುದು ಕೈ ಕೊಟ್ಟಿದೆ. ಸಾಕಷ್ಟು ರೀಸರ್ಚ್ ಮಾಡಿ ರಾಹುಲ್ ಸಿನಿಮಾ ತೆರೆಗೆ ತಂದಿದ್ದಾರೆ. ಅವತ್ತಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ಅದನ್ನು ಮೆಚ್ಚಲೇಬೇಕು. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಹಿನ್ನೆಲೆ ಸಂಗೀತ ಕೆಲ ಸನ್ನಿವೇಶಗಳನ್ನು ಮೇಲೆತ್ತಲು ವಿಫಲವಾಗಿದೆ.

ಕೊನೆಯದಾಗಿ

ಒಟ್ಟಾರೆ ಟೆಕ್ನಿಕಲಿ 'ರಣಬಾಲಿ' ಸಿನಿಮಾ ಚೆನ್ನಾಗಿದೆ ಎನ್ನಬಹುದು. ಆದರೆ ಭಾವನಾತ್ಮಕವಾಗಿ ಕನೆಕ್ಟ್ ಆಗುವುದಿಲ್ಲ. ಅದಕ್ಕೆ ಕಾರಣ ಚಿತ್ರದ ಕಾಲಾವಧಿ ಎನ್ನಬಹುದು. ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಒಂದು ಹಂತಕ್ಕೆ ಸಿನಿಮಾ ನೋಡುವಂತೆ ಆಗುತ್ತದೆ. ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋದ್ರೆ ಒಮ್ಮೆ ನೋಡಬಹುದಾದ ಸಿನಿಮಾ.

ರೇಟಿಂಗ್: 2.5/5