ದೀಪಾವಳಿ ಹಬ್ಬ 'ರಾಮಾಯಣ' ಚಿತ್ರಕ್ಕೆ ವರವಾಗಿದೆ. ಸೋಮವಾರ, ಮಂಗಳವಾರದ ಹಬ್ಬದ ರಜೆ ಸಿನಿಮಾ ಕಲೆಕ್ಷನ್ ಹೆಚ್ಚಿಸಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಕುಟುಂಬ ಸಮೇತ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಸೋಮವಾರ ದಾಖಲೆ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡಿದೆ.

ದೊಡ್ಡ ಪರದೆ ಮೇಲೆ 'ರಾಮಾಯಣ' ದೃಶ್ಯವ ವೈಭವ ಯಾರಿಗೆ ನೋಡಲು ಇಷ್ಟ ಇಲ್ಲ ಹೇಳಿ. ಅದು ಕೂಡ ಇಷ್ಟು ಅದ್ಧೂರಿಯಾಗಿ ತೆರೆಗೆ ಬಂದಮೇಲೆ ಪ್ರೇಕ್ಷಕರು ಸಹಜವಾಗಿಯೇ ಸಿನಿಮಾ ನೋಡಲು ಮುಂದಾಗುತ್ತಾರೆ. ಭಾರೀ ಬಜೆಟ್‌ನಲ್ಲಿ ಕಣ್ಣಿಗೆ ಹಬ್ಬ ಎನ್ನುವಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮೊದಲ ನೋಟದಲ್ಲೇ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಅದು ಸಿನಿಮಾ ಗಳಿಕೆಯಲ್ಲೂ ಗೊತ್ತಾಗ್ತಿದೆ.

5ನೇ ದಿನ ಕಲೆಕ್ಷನ್

ಫಸ್ಟ್ ವೀಕೆಂಡ್ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿತ್ತು. ಸೋಮವಾರ 130 ಕೋಟಿ ರೂ. ಕೊಳ್ಳೆ ಹೊಡೆದು ಸಿನಿಮಾ ಸದ್ದು ಮಾಡಿದೆ. ಒಟ್ಟು ಗಳಿಕೆ 630 ಕೋಟಿ ರೂ. ಗಡಿ ದಾಟಿದೆ. ಇನ್ನು ಗಂಟೆಗೆ 1.35 ಲಕ್ಷ ಟಿಕೆಟ್ ಬುಕ್‌ ಮೈ ಶೋನಲ್ಲಿ ಬುಕ್ ಆಗಿತ್ತು. ಅಷ್ಟರಮಟ್ಟಿಗೆ ಸೋಮವಾರ ಜನ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ನುಗ್ಗಿದ್ದರು. ದೇಶ ವಿದೇಶಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಹೊಸ ದಾಖಲೆ

ಗಂಟೆಗೆ ಅತಿಹೆಚ್ಚು ಟಿಕೆಟ್ ಬುಕ್ ಆಗಿರುವ ದಾಖಲೆಗಳನ್ನು ಹಿಂದಿಕ್ಕಿ 'ರಾಮಾಯಣ' ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಒಂದು ಹಂತದಲ್ಲಿ ಗಂಟೆಗೆ 1.09 ಲಕ್ಷ ಟಿಕೆಟ್ ಬುಕ್ ಆಗಿ 'ಧುರಂಧರ್'- 2 ಸಿನಿಮಾ ದಾಖಲೆ ಬರೆದಿತ್ತು. ಸೋಮವಾರ 'ರಾಮಾಯಣ' ಚಿತ್ರಕ್ಕೆ ಒಂದು ಗಂಟೆಯಲ್ಲಿ 1.35 ಲಕ್ಷ ಟಿಕೆಟ್ ಬುಕ್ ಆಗಿತ್ತು. ಗಂಟೆಗೆ 1.07 ಲಕ್ಷ ಟಿಕೆಟ್ ಬುಕ್ ಆಗಿ 'ಪುಷ್ಪ'-2 ಸಿನಿಮಾ ಮೂರನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಕಲೆಕ್ಷನ್

ರಾವಣನಾಗಿ ಯಶ್ ನಟಿಸಿರುವ ಕಾರಣಕ್ಕೆ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಜನ ಸಿನಿಮಾ ನೋಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕದಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಕನ್ನಡ ಡಬ್ಬಿಂಗ್ ಕೂಡ ಸೊಗಸಾಗಿದ್ದು ಕನ್ನಡ ಸಿನಿಮಾ ನೋಡಿದಂತಿದೆ. ಈಗಾಗಲೇ ರಾಜ್ಯದಲ್ಲಿ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಸೋಮವಾರಕ್ಕಿಂತ ಮಂಗಳವಾರ ಸಿನಿಮಾ ಹೆಚ್ಚು ಗಳಿಕೆ ಕಾಣುವ ಸುಳಿವು ಸಿಕ್ಕಿದೆ.