ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ತೆರೆಗಪ್ಪಳಿಸಿ ಸದ್ದು ಮಾಡ್ತಿದೆ. ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ತೆರೆಕಂಡು ಪ್ರೇಕ್ಷಕರನ್ನು ರಂಜಿಸ್ತಿದೆ. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್ ಕಾರಣಕ್ಕೆ ಮೊದಲ ದಿನ ಸಿನಿಮಾ ಕಲೆಕ್ಷನ್ ಕೂಡ ಜೋರಾಗಿತ್ತು.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಐಮ್ಯಾಕ್ಸ್, ತ್ರೀಡಿ, ಟುಡಿ ಫಾರ್ಮೆಟ್ಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಕರ್ನಾಟಕದಲ್ಲಿ ಚಿತ್ರಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ಸಿನಿಮಾ ಅದ್ಭುತ ಪ್ರದರ್ಶನ ಕಾಣ್ತಿದೆ. ಮೊದಲ ದಿನದ ಗಳಿಕೆಯಲ್ಲಿ ಬೆಂಗಳೂರಿನ ಪಾಲು ದೊಡ್ಡದಿದೆ. ರಾವಣನಾಗಿ ಯಶ್ ಅಬ್ಬರಿಸಿರುವುದರಿಂದ ಕನ್ನಡ ಸಿನಿರಸಿಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.
ಫಸ್ಟ್ ಡೇ ಕಲೆಕ್ಷನ್
ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ಕೊಟ್ಟಿದೆ. ಮೊದಲ ದಿನ 155 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಇನ್ನು sacnilk ಸೇರಿದಂತೆ ಒಂದಷ್ಟು ವೆಬ್ಸೈಟ್ಗಳಲ್ಲಿ ಕಲೆಕ್ಷನ್ ಲೆಕ್ಕ ಕೊಟ್ಟಿವೆ. ಮೊದಲ ದಿನ ಭಾರತದಲ್ಲಿ 77.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 64.85 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಇದರಲ್ಲಿ ಕನ್ನಡ ವರ್ಷನ್ ಪಾಲು 7.25 ಕೋಟಿ ರೂ. ಎನ್ನುವುದು ವಿಶೇಷ.
'ಆದಿಪುರುಷ್' ಎದುರು ಡಲ್
ರಾಮಾಯಣ ಕಾವ್ಯ ಆಧರಿಸಿ ಪ್ರಭಾಸ್ ನಟಿಸಿದ್ದ 'ಆದಿಪುರುಷ್' ಸಿನಿಮಾ 3 ವರ್ಷಗಳ ಹಿಂದೆ ಸದ್ದು ಮಾಡಿತ್ತು. ಓಂ ರಾವುತ್ ನಿರ್ದೇಶನದ ಸಿನಿಮಾ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಭಾರತದಲ್ಲಿ ಮಾತ್ರ ಮೊದಲ ದಿನ ಈ ಚಿತ್ರ 86.75 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಈ ದಾಖಲೆ ಮುರಿಯಲು 'ರಾಮಾಯಣ' ಚಿತ್ರ ಹಿಂದೆ ಬಿದ್ದಿದೆ.
ಮುಂದೇನು ಕಥೆ ?
ಅಂದಾಜು 1600 ಕೋಟಿ ರೂ. ಬಜೆಟ್ನಲ್ಲಿ 'ರಾಮಾಯಣ' ಭಾಗ- 1 ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಲಾಗ್ತಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಬೇಕಿದೆ. ವೀಕೆಂಡ್ನಲ್ಲಿ ಸಿನಿಮಾ ಗಳಿಕೆ ಹೆಚ್ಚುವ ನಿರೀಕ್ಷೆಯಿದೆ. ಆದರೂ ನಿರೀಕ್ಷಿತಮಟ್ಟದಲ್ಲಿ ಚಿತ್ರಕ್ಕೆ ಓಪನಿಂಗ್ ಸಿಕ್ಕಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಮುಂದೆ ಚಿತ್ರದ ಬಾಕ್ಸಾಫೀಸ್ ಗಳಿಕೆ ಏನಾಗುತ್ತೆ ಎಂದು ಕಾದು ನೋಡಬೇಕಿದೆ.