ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿದೆ. ಕೇವಲ 8 ದಿನದಲ್ಲಿ ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರಿದೆ. ಭಾರತದಲ್ಲಿ 500 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ ದಾಖಲೆ ತನ್ನದಾಗಿಸಿಕೊಂಡಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ರೆಸ್ಪಾನ್ಸ್ ಜೋರಾಗಿದೆ.

ನವೆಂಬರ್ 5ರಂದು ತೆರೆಕಂಡ ಸಿನಿಮಾ ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಇಂಗ್ಲೀಷ್ ಭಾಷೆಗೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗಿರುವುದು ವಿಶೇಷ. ಹೊರ ದೇಶಗಳಲ್ಲಿ ಸ್ಪೆಷಲ್ ಪ್ರೀಮಿಯರ್ ಶೋಗಳು ಏರ್ಪಡಿಸಲಾಗಿತ್ತು. ಚಿತ್ರತಂಡ ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿತ್ತು. ದೀಪಾವಳಿ ಸಂಭ್ರಮದಲ್ಲಿ ಸೋಮವಾರ ಹಾಗೂ ಮಂಗಳವಾರ ಸಿನಿಮಾ ದಾಖಲೆ ಮಟ್ಟದಲ್ಲಿ ಗಳಿಕೆ ಕಂಡಿತ್ತು. ಬಳಿಕ ಬುಧವಾರ ಹಾಗೂ ಗುರುವಾರ ಕೂಡ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ.

1000 ಕೋಟಿ ರೂ. ಗಳಿಕೆ

ಹೌದು ಮೊದಲ 8 ದಿನದಲ್ಲಿ 'ರಾಮಾಯಣ' ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರಿದೆ. ಮೊದಲ ವಾರ 934 ಕೋಟಿ ರೂ. ಬಾಚಿದ್ದ ಸಿನಿಮಾ ಗುರುವಾರ (ನವೆಂಬರ್ 12) ಕೂಡ ಭರ್ಜರಿ ಪ್ರದರ್ಶನ ಕಂಡಿದೆ. ಆ ಮೂಲಕ ಸಿನಿಮಾ ಗ್ರಾಸ್ ಕಲೆಕ್ಷನ್ 1000 ಕೋಟಿ ರೂ. ಗಡಿ ದಾಟಿದೆ. ಈ ವೀಕೆಂಡ್ ಕೂಡ ಭರ್ಜರಿ ಗಳಿಕೆ ನಿರೀಕ್ಷೆ ಮಾಡಲಾಗ್ತಿದೆ.

ಭಾರತದಲ್ಲಿ 500 ಕೋಟಿ ರೂ.

ವಿಶ್ವದಾದ್ಯಂತ 1000 ಕೋಟಿ ರೂ. ಕೊಳ್ಳೆ ಹೊಡೆದಿರುವ ಸಿನಿಮಾ ಭಾರತದಲ್ಲಿ 500 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಮೊದಲ ವಾರ ಈ ಸಾಧನೆ ಮಾಡಿದೆ. ಆದರೆ 'ಧುರಂಧರ್'- 2 ಸಿನಿಮಾ ಕೇವಲ 6 ದಿನಗಳಲ್ಲಿ ಈ ಸಾಧನೆ ಮಾಡಿತ್ತು. ಇದೀಗ ಎರಡನೇ ಸ್ಥಾನದಲ್ಲಿ 'ರಾಮಾಯಣ' ಚಿತ್ರ ಜಾಗ ಮಾಡಿಕೊಂಡಿದೆ.

ಕೇರಳ, ಕರ್ನಾಟಕದಲ್ಲಿ ದಾಖಲೆ

ಉತ್ತರ ಭಾರತಕ್ಕಿಂತ ದಕ್ಷಿಣದಲ್ಲಿ 'ರಾಮಾಯಣ' ಸಿನಿಆ ಆರ್ಭಟ ಜೋರಾಗಿದೆ. ಮುಖ್ಯವಾಗಿ ಕೇರಳ ಹಾಗೂ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ 100 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಹುಬ್ಬೇರಿಸಿದೆ. ಬಾಲಿವುಡ್ ಸಿನಿಮಾವೊಂದು ಕರ್ನಾಟಕದಲ್ಲಿ ಈ ಪಾಟಿ ಸದ್ದು ಮಾಡ್ತಿರೋದು ಇದೇ ಮೊದಲು. ಕನ್ನಡ ವರ್ಷನ್ ಗಳಿಕೆ ಮಾತ್ರ 50 ಕೋಟಿ ರೂ. ಗಡಿ ದಾಟಿದೆ. ಇನ್ನು ಕೇರಳದಲ್ಲಿ ಸಿನಿಮಾ 20 ಕೋಟಿ ರೂ. ಕೊಳ್ಳೆ ಹೊಡೆದಿದ್ದು ಬಾಲಿವುಡ್ ಸಿನಿಮಾವೊಂದು ದೇವರನಾಡಲ್ಲಿ ಗಳಿಸಿದ ಹೆಚ್ಚು ಮೊತ್ತ ಎನ್ನಲಾಗ್ತಿದೆ.