ವಿಚಿತ್ರ ಕಾರಣಕ್ಕೆ ಕರ್ನಾಟಕವನ್ನು ಉದಾಹರಣೆ ಕೊಟ್ಟು ತೆಲುಗು ನಿರ್ಮಾಪಕ ನಾಗವಂಶಿ ಮಾಡಿರುವ ಕಾಮೆಂಟ್ ವೈರಲ್ ಆಗ್ತಿದೆ. ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಟಿಕೆಟ್ ದರ ನಿಗದಿಯಾಗಿದೆ. ಆದರೆ ದೊಡ್ಡ ಸಿನಿಮಾಗಳು ಬಂದಾಗ ಸರ್ಕಾರದ ಬಳಿ ಮನವಿ ಮಾಡಿ ಟಿಕೆಟ್ ದರ ಹೆಚ್ಚಿಸಲು ಅನುಮತಿ ಪಡೆಯಲಾಗುತ್ತದೆ.

'ಜೈಲರ್'-2 ಚಿತ್ರದ ಆಂಧ್ರ, ತೆಲಂಗಾಣ ವಿತರಣೆ ಹಕ್ಕು ನಾಗವಂಶಿ ಖರೀದಿಸಿದ್ದಾರೆ. ಸರ್ಕಾರದ ಬಳಿ ಮನವಿ ಮಾಡಿ ಟಿಕೆಟ್ ದರ ಹೆಚ್ಚಿಸಿದ್ದಾರೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಮಾಧ್ಯಮಗಳಲ್ಲಿ ಕೂಡ ಈ ವಿಚಾರ ಭಾರೀ ಸುದ್ದಿ ಆಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗವಂಶಿ ನಾವು ಟಿಕೆಟ್ ದರ ಹೆಚ್ಚು ಮಾಡಿರುವುದು ಏನೇನು ಅಲ್ಲ, ಒಮ್ಮೆ ಕರ್ನಾಟಕಕ್ಕೆ ಹೋಗಿ ನೋಡಿ ಟಿಕೆಟ್ ದರ ಎಷ್ಟು ಇದೆ ಅಂತ. 1000 ರೂ, 1500 ರೂ, 2000 ರೂ.ಗೆ ಅಲ್ಲಿ ಒಂದು ಟಿಕೆಟ್ ಮಾರಾಟವಾಗ್ತಿದೆ. ಅದಕ್ಕೆ ಹೋಲಿಸಿದರೆ ನಾವು ಮಾಡಿರುವುದು ಏನೇನು ಅಲ್ಲ ಎಂದಿದ್ದಾರೆ.

ನಿರ್ಮಾಪಕ ನಾಗವಂಶಿ ಹೇಳಿರುವುದು ನಿಜ ಕೂಡ. 'ಜೈಲರ್'-2 ಚಿತ್ರಕ್ಕೆ ಚೆನ್ನೈನಲ್ಲೇ ಇಲ್ಲದ್ದಷ್ಟು ದರ ಬೆಂಗಳೂರಿನಲ್ಲಿದೆ. ಸಿನಿಮಾ ಬಿಡುಗಡೆ ಆಗಿ 3 ದಿನ ಕಳೆದರೂ ಕೆಲವೆಡೆ ದರ ಕಮ್ಮಿ ಆಗಿಲ್ಲ. ಕರ್ನಾಟಕದಲ್ಲಿ ಕೂಡ ಸಿನಿಮಾ ಟಿಕೆಟ್ ದರ ನಿಗದಿ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ 'ಕಾಂತಾರ-1' ಚಿತ್ರಕ್ಕಾಗಿ ಸ್ವತಃ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆ ಆಗಿತ್ತು.

'ಜೈಲರ್- 2' ಚಿತ್ರಕ್ಕೆ ಮೊದಲ ದಿನ ಸರಾಸರಿ ಟಿಕೆಟ್ ದರ ಹೈದರಾಬಾದ್‌ನಲ್ಲಿ 224 ರೂ. ಹಾಗೂ ಚೆನ್ನೈನಲ್ಲಿ ಕೇವಲ 179 ರೂ. ಅಷ್ಟಿತ್ತು. ಆದರೆ ಬೆಂಗಳೂರಿನಲ್ಲಿ ಮಾತ್ರ 587 ರೂ. ಆಗಿತ್ತು. ಚೆನ್ನೈನ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಒಂದು ಟಿಕೆಟ್ ದರ 300 ರೂ. ಹೆಚ್ಚು ಇರಲಿಲ್ಲ. ಆದರೆ ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ 800 ರೂ. ಹಾಗೂ 1000 ರೂ. ಇತ್ತು ಎನ್ನುವುದು ಬೇಸರದ ಸಂಗತಿ. ಕರ್ನಾಟಕಲ್ಲಿ ಕನ್ನಡ ಚಿತ್ರಕ್ಕೂ ಇಷ್ಟು ಟಿಕೆಟ್ ದರ ಇರುವುದಿಲ್ಲ. ಆದರೆ ಪರಭಾಷಾ ಚಿತ್ರಗಳ ಟಿಕೆಟ್ ದರ ಮಾತ್ರ ಗಗನಕ್ಕೆ ಏರುತ್ತದೆ.

ತೆಲುಗು ಮಾಧ್ಯಮಗಳ ಜೊತೆ ನಾಗವಂಶಿ ಮಾತನಾಡಿ "ನಾವು ಟಿಕೆಟ್ ದರ ಹೆಚ್ಚಿಸಿ ಪ್ರೇಕ್ಷಕರಿಗೆ ಹೊರೆ ಮಾಡುತ್ತಿದ್ದೇವೆ ಎಂದು ಸುಖಾಸುಮ್ಮನೆ ಹೇಳಬೇಡಿ. ಬೆಂಗಳೂರಿನಲ್ಲಿ ಟಿಕೆಟ್ ದರ 1000 ರೂ, 1800 ರೂ.ವರೆಗೂ ಇದೆ. ನಿಮ್ಮನ್ನೆಲ್ಲಾ(ಪತ್ರಕರ್ತರನ್ನು) ಒಮ್ಮೆ ಅಲ್ಲಿಗೆ ಸಿನಿಮಾ ನೋಡಲು ಕಳಿಸಬೇಕು. ಅಲ್ಲಿ ಒಂದು ತಿಂಗಳು ಇದ್ದು ಮೂರ್ನಾಲ್ಕು ಸಿನಿಮಾಗಳನ್ನು ನೋಡಿ ಬಂದ್ರೆ ಬಳಿಕ ನಾವು ಎಷ್ಟೇ ಟಿಕೆಟ್ ದರ ಹೆಚ್ಚಿಸಿದ್ರು, ನೀವೇ ಒಪ್ಪಿಕೊಳ್ತೀರಾ" ಎಂದು ವ್ಯಂಗ್ಯವಾಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.