ಬಾಕ್ಸಾಫೀಸ್‌ನಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಆರ್ಭಟ ಮುಂದುವರೆದಿದೆ. ನೆಲ್ಸನ್ ನಿರ್ದೇಶನದ 'ಜೈಲರ್- 2' ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಂಡಿದೆ. ಹಾಗಾಗಿ ಎರಡನೇ ದಿನವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಒಂದಷ್ಟು ನ್ಯೂನ್ಯತೆಗಳ ನಡುವೆ ಕೂಡ ಚಿತ್ರಮಂದಿರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮ್ಯಾಜಿಕ್ ನಡೀತಿದೆ.

ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಮಾಸ್ ಪ್ರೇಕ್ಷಕರನ್ನು ರಂಜಿಸಲು ಬೇಕಾದ ಅಂಶಗಳನ್ನೆಲ್ಲಾ ಸೇರಿಸಿ 'ಜೈಲರ್' ಸೀಕ್ವೆಲ್ ಕಟ್ಟಿಕೊಡಲಾಗಿದೆ. ಶಿವಣ್ಣ, ಮೋಹನ್ ಲಾಲ್, ಹೃತಿಕ್ ರೋಷನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡು ಮತ್ತಷ್ಟು ರಂಗು ತುಂಬಿದ್ದಾರೆ. ಇದೆಲ್ಲವೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ವೀಕೆಂಡ್ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗ್ತಿದೆ.

2ನೇ ದಿನದ ಕಲೆಕ್ಷನ್

ಅಡ್ವಾನ್ಸ್ ಬುಕ್ಕಿಂಗ್ ಸೇರಿ ಮೊದಲ ದಿನ 125.25 ರೂ. ಗ್ರಾಸ್ ಕಲೆಕ್ಷನ್ ಮಾಡಿ 'ಜೈಲರ್- 2' ಚಿತ್ರ ಸದ್ದು ಮಾಡಿತ್ತು. ಇನ್ನು 2ನೇ ದಿನ 90 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಆ ಮೂಲಕ ಒಟ್ಟು ಮೊದಲ 2ನೇ ದಿನಗಳಲ್ಲಿ ಸಿನಿಮಾ 200 ಕೋಟಿ ರೂ.ಗೂ ಹೆಚ್ಚು ಗಳಿಕೆ ಬಾಚಿಕೊಂಡಂತಾಗಿದೆ. ಕರ್ನಾಟಕದಲ್ಲೇ 20 ಕೋಟಿ ರೂ. ಗಡಿ ದಾಟಿದೆ.

'ಕೂಲಿ'ಗಿಂತ ಕಮ್ಮಿ

ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಆರಂಭದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. 2ನೇ ದಿನ ಈ ಸಿನಿಮಾ 118 ಕೋಟಿ ರೂ. ಕೊಳ್ಳೆ ಹೊಡೆದಿತ್ತು.

'ಜೈಲರ್- 2' ಟಾಕ್

ಅಂದಹಾಗೆ 'ಜೈಲರ್- 2' ಚಿತ್ರಕ್ಕೆ ಮೌತ್ ಟಾಕ್ ಚೆನ್ನಾಗಿದೆ. 'ಕೂಲಿ'ಗಿಂತ 'ಜೈಲರ್- 2' ಸೂಪರ್ ಎಂದು ಕೆಲವರು ಹೇಳುತ್ತಿದ್ದಾರೆ. ಇದೇ ಮುಂದೆ ಸಿನಿಮಾ ಕಲೆಕ್ಷನ್ ಹೆಚ್ಚಿಸುವ ಸುಳಿವು ಸಿಕ್ತಿದೆ. ದಸರಾ ರಜೆ ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಸಿನಿಮಾ ಗಳಿಕೆಗೆ ವರವಾಗುವ ಸುಳಿವು ಸಿಗುತ್ತಿದೆ.