ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ 20 ವರ್ಷಗಳ ಸಂಭ್ರಮದಲ್ಲಿದ್ದಾರೆ. 'ಬೃಂದಾವಿಹಾರಿ' ಸಿನಿಮಾ ಮೂಲಕ ಶೀಘ್ರದಲ್ಲೇ ಗಣಿ ಮತ್ತೆ ತೆರೆಮೇಲೆ ಬರ್ತಿದ್ದಾರೆ. ಅನುಶ್ರೀ ಯೂಟ್ಯೂಬ್ ಚಾನಲ್ ವಿಶೇಷ ಸಂದರ್ಶನದಲ್ಲಿ ಗಣಿ ಭಾಗವಹಿಸಿದ್ದರು. ಆಪ್ತ ಸ್ನೇಹಿತ, ನಿರ್ದೇಶಕ ಯೋಗರಾಜ್ ಭಟ್ ಕೂಡ ಸಾಥ್ ಕೊಟ್ಟಿದ್ದರು. ಚಿತ್ರರಂಗದಲ್ಲಿ ಇಬ್ಬರೂ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡು ಸಾಕಷ್ಟು ನಕ್ಕಿದ್ದಾರೆ. ಇಡೀ ಸಂದರ್ಶನ ಬಹಳ ಮಜವಾಗಿದೆ.
ಯೋಗರಾಜ್ ಭಟ್ ಅವರ ಹುಟ್ಟುಹಬ್ಬದ ದಿನವೇ ಸಂದರ್ಶನ ಚಿತ್ರೀಕರಣವಾಗಿದೆ. ಫೈಲ್ಸ್ ಚೆಕಪ್ಗೆ ಹೋಗಬೇಕಿತ್ತು. ಅದರ ನಡುವೆ ನಾನು ಈ ಕಾರ್ಯಕ್ರಮಕ್ಕೆ ಬಂದೆ ಎಂದು ಹೇಳಿ ಭಟ್ರು ನಕ್ಕಿದ್ದಾರೆ. ನಮ್ಮ ತಂಡದಲ್ಲಿ ಆರಂಭದಲ್ಲೇ ಗೆಲುವು ಕಂಡಿದ್ದು ಗಣೇಶ್.. ಅವನನ್ನು ಬಿಟ್ರೆ ನಾನು ದುಡಿತಿದ್ದೆ.. ಆಗ ಗಣೇಶ್ ಕಾಮಿಡಿ ಟೈಮ್ ಶೋ ಮಾಡ್ತಿದ್ದ. ನಮ್ಮ ತಂಡದಲ್ಲಿ ಮೊದಲು ಕಾರ್ ತಗೊಂಡಿದ್ದು ಗಣೇಶ್.. ಬಳಿಕ ನಾನು ತಗೊಂಡೆ ಎಂದು ಯೋಗರಾಜ್ ಭಟ್ ಹೇಳಿದ್ದಾರೆ.
ಭಟ್ರ ಬಿಳಿ ಬಣ್ಣದ ಎಸ್ಟೀಮ್ ಕಾರಿಗೆ ಕೆಂಪು ಬಣ್ಣ ಬಳಿದು 'ಮುಂಗಾರುಮಳೆ' ಚಿತ್ರದಲ್ಲಿ ಬಳಸಿಕೊಂಡಿದ್ದೆವು ಎಂದು ಗಣೇಶ್ ನೆನಪಿಸಿಕೊಂಡಿದ್ದಾರೆ. ನಮ್ಮ ತಂಡದಲ್ಲಿ ಗಣೇಶ್ ಬಹಳ ಜುಗ್ಗ.. ಆದ್ರೆ ಇವ್ನೇ ಕರೆಕ್ಟ್ ಆಗಿ ಇದ್ದಿದ್ದು. ಯಾರ ಹತ್ರ ಹಣ ಇಲ್ಲ ಅಂದ್ರು ಗಣೇಶ ಬಳಿ ಕೇಳ್ತಿದ್ರು.. ಸಹಾಯ ಮಾಡ್ತಿದ್ದ ಎಂದು ಭಟ್ರು ಹೇಳಿದ್ದಾರೆ. ಡಿವಿಜಿ ರೋಡ್ ತರಕಾರಿ ಅಂಗಡಿಗಳಲ್ಲಿ ಒಂದೊಂದೇ ತರಕಾರಿ ತಗೊಂಡು ಹೋಗಿ ತಿನ್ನುತ್ತಿದ್ದೆ ಎಂದು ಗಣೇಶ್ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.
'ಮಣಿ' ಸಿನಿಮಾ ಗೆದ್ರೆ ನಮ್ಮ ತಂಡದಲ್ಲಿ ಎಲ್ಲರಿಗೂ ಕೆಲಸ ಸಿಗುತ್ತೆ ಅಂದುಕೊಂಡಿದ್ವಿ. ಆದ್ರೆ ಸಿನಿಮಾ ಸೋತುಹೋಯ್ತು.. 'ರಂಗ ಎಸ್ಎಸ್ಎಲ್ಸಿ' ಸಿನಿಮಾ ಸಮಯದಲ್ಲಿ ಯೋಗರಾಜ್ ಭಟ್ ಹಾಗೂ ದುನಿಯಾ ಸೂರಿ ಬಹಳ ಜಗಳ ಮಾಡ್ತಿದ್ರು. ಜಗಳ ಬಿಡಿಸೋದೆ ನಮಗೆ ದೊಡ್ಡ ಕೆಲಸ ಆಗ್ತಿತ್ತು.. ನಾವು ನೋಡಿ ಮಜಾ ತಗೋತ್ತಿದ್ವಿ ಎಂದು ಗಣೇಶ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ಚೆಲ್ಲಾಟ' ಚಿತ್ರಕ್ಕೆ ಗಣೇಶ್ ಹೀರೊ ಅಂದಾಗ ತಂಡದಲ್ಲಿ ಇದ್ದ ಎಲ್ಲರಿಗೂ ಹೊಟ್ಟೆಉರಿ ಶುರುವಾಗಿತ್ತು.. ನಮ್ಮ ಜೊತೆಗಿದ್ದವನು ಒಬ್ಬ ಹೀರೊ ಆಗಿಬಿಟ್ಟ ಎಂದು ನಮ್ಮವರಿಗೆ ಉರಿ ಶುರುವಾಗಿತ್ತು ಅದನ್ನ ನಾನೇ ಕೇಳಿದ್ದೀನಿ ಎಂದು ಭಟ್ರು ತಮಾಷೆಯಾಗಿ ವಿವರಿಸಿದ್ದಾರೆ.
ಗಣೇಶ್ ನೆನಪಿನ ಶಕ್ತಿ, ನಟನೆಯ ಚಾತುರ್ಯದ ಬಗ್ಗೆ ಯೋಗರಾಜ್ ಭಟ್ ಹೇಳಿ ಬೆರಗಾಗಿದ್ದಾರೆ. ನಾನು ಯಾವಾಗಾದ್ರು ಚೆನ್ನಾಗಿ ನಟಿಸಿಬಿಟ್ರೆ, ಮರುದಿನ ನನಗೆ ಪ್ಯಾಂಟ್ ಇಲ್ಲದಂತಹ ದೃಶ್ಯ ಇಟ್ಟುಬಿಡ್ತಿದ್ರು. ಆ ರೀತಿ ಸೇಡು ತೀರಿಸಿಕೊಳ್ತಿದ್ರು ಎಂದು ಉದಾಹರಣೆ ಸಮೇತ ಗಣೇಶ್ ವಿವರಿಸಿದ್ದಾರೆ. ಗಣೇಶ್ ತಮ್ಮ ಬಾಲ್ಯದ ಕಷ್ಟದ ದಿನಗಳು, ಸಿನಿಮಾ ಹುಚ್ಚು, ಹಂತಹಂತವಾಗಿ ಹೀರೊ ಆಗಿದ್ದು ಎಲ್ಲವನ್ನು ನೆನಪಿಸಿಕೊಂಡಿದ್ದಾರೆ.