ಬಿಗ್‌ಬಾಸ್ ಶೋ ಖ್ಯಾತಿಯ ಸ್ಪಂದನಾ ಸೋಮಣ್ಣ ಮದುವೆ ನಿಶ್ಚಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವರುಣ್ ಮುನಿರಾಜು ಎಂಬುವವರ ಜೊತೆ ಹಸೆಮಣೆ ಏರಲು ಆಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ತಮ್ಮ ಬಾಯ್‌ಫ್ರೆಂಡ್ ಯಾರು ಎಂದು ಸ್ಪಂದನಾ ಪರಿಚಯಿಸಿದ್ದರು.
ಪ್ಯಾರಿಸ್‌ನಲ್ಲಿ ವರುಣ್ ಪ್ರಪೋಸ್ ಮಾಡಿರುವ ಫೋಟೊಗಳನ್ನು ಈಗ ಹಂಚಿಕೊಂಡು ಸಿಹಿಸುದ್ದಿ ಕೊಟ್ಟಿದ್ದಾರೆ. "ನಾವಿಬ್ಬರು ಮದುವೆ ಆಗ್ತಿದ್ದೀವಿ" ಎಂದು ಬರೆದುಕೊಂಡಿದ್ದಾರೆ. ನಿನ್ನನ್ನು ನನ್ನ "ಪತಿ" (HUSBAND) ಎಂದು ಕರೆಯಲು ನಾನು ಕಾತುರಳಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಜೀವನದ ಹಾದಿಯನ್ನು ಕಂಡುಕೊಳ್ಳುತ್ತಿದ್ದ ಆ ದಿನಗಳಲ್ಲಿ ಅಂದರೆ ಉದ್ಯೋಗವಿಲ್ಲದ, ಹಣವಿಲ್ಲದ ಮತ್ತು ಭವಿಷ್ಯ ಎತ್ತ ಸಾಗುತ್ತಿದೆ ಎಂಬ ಅರಿವಿಲ್ಲದಿದ್ದರೂ, ಯಾವಾಗಲೂ ಪರಸ್ಪರರ ಬೆಂಬಲವಿದ್ದ ಆ ಸಮಯದಲ್ಲಿ - ನಾವು ಭೇಟಿಯಾಗಿದ್ದು ನನಗೆ ಇನ್ನೂ ನೆನಪಿದೆ ಎಂದು ತಮ್ಮಿಬ್ಬರ ಸ್ನೇಹ, ಪ್ರೀತಿ ಬಗ್ಗೆ ಸ್ಪಂದನಾ ಮೆಲುಕು ಹಾಕಿದ್ದಾರೆ.
ವರುಣ್ ನೀನು ನನ್ನೊಂದಿಗೆ ಆಡಿಷನ್‌ಗಳಿಗೆ ಬಂದಿದ್ದೆ, ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹಿಸಿದ್ದೆ. ನನಗೇ ನನ್ನ ಬಗ್ಗೆ ಸಂಶಯವಿದ್ದಾಗಲೂ ಪ್ರತಿ ಹಂತದಲ್ಲೂ ನನ್ನನ್ನು ನಂಬಿದ್ದೆ. ಇಷ್ಟು ವರ್ಷಗಳ ಕಾಲ ನೀನೇ ನನ್ನ ಶಕ್ತಿ ಮತ್ತು ಅತಿದೊಡ್ಡ ಬೆಂಬಲಿಗನಾಗಿದ್ದೀಯ ಎಂದು ಸ್ಪಂದನಾ ಭಾವಿ ಪತಿ ಬಗ್ಗೆ ನೆನಪಿನಂಗಳಕ್ಕೆ ಜಾರಿದ್ದಾರೆ.
ಮೈಸೂರು ಮೂಲದ ಇಂಜಿನಿಯರಿಂಗ್ ಪದವೀಧರೆ ಸ್ಪಂದನಾ ಸೋಮಣ್ಣ 'ನಾನು ನನ್ನ ಕನಸು', 'ಗೃಹಪ್ರವೇಶ' ಹಾಗೂ 'ಕರಿಮಣಿ' ಧಾರಾವಾಹಿಗಳಲ್ಲಿ ನಟಿಸಿದ್ದರು. ದಿಲ್‌ಖುಷ್, ಮರೀಚಿ ಎಂಬ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12ರಲ್ಲಿ ಫಿನಾಲೆವರೆಗೂ ಹೋಗಿದ್ದರು.