ಯಶ್ ಹಾಗೂ ರಣ್‌ಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾ ಬಿಡುಗಡೆಗೆ 15 ದಿನ ಬಾಕಿಯಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಸುದ್ದಿಗೋಷ್ಠಿ ನಡೀತು. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ರಕುಲ್ ಪ್ರೀತ್ ಸಿಂಗ್ ಸೇರಿ ಇಡೀ ಚಿತ್ರತಂಡ ಭಾಗವಹಿಸಿ ತಮ್ಮ ಸಿನಿಮಾ ಬಗ್ಗೆ ಮಾತನಾಡಿತ್ತು. ಯಶ್ ಪತ್ನಿ ರಾಧಿಕಾ ಪಂಡಿತ್ ಸಮೇತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸಿದ್ದಾರೆ. ಒಂದ್ಕಾಲದಲ್ಲಿ ರೊಮ್ಯಾಂಟಿಕ್ ಹೀರೊ ಆಗಿ ರಣ್‌ಬೀರ್ ಮೋಡಿ ಮಾಡಿದವರು. ಅವತ್ತಿನ ಅವರಿಗೆ ಫೀಮೇಲ್ ಫ್ಯಾನ್ ಫಾಲೋಯಿಂಗ್ ಹೇಗಿತ್ತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅದೆಷ್ಟೊ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದರು. ರಾಧಿಕಾ ಪಂಡಿತ್ ಅವರಿಗೂ ಕೂಡ ರಣ್‌ಬೀರ್ ಬಹಳ ಅಚ್ಚುಮೆಚ್ಚು. ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದರು. ಮೊನ್ನೆ ರಾಮಾಯಣ ಚಿತ್ರದ ಕಾರ್ಯಕ್ರಮದಲ್ಲಿ ರಣ್‌ಬೀರ್- ರಾಧಿಕಾ ಎದುರುಬದಿರಾಗಿದ್ದರು. ಸ್ವತಃ ಯಶ್ ತಮ್ಮ ಪತ್ನಿಯನ್ನು ರಣ್‌ಬೀರ್‌ಗೆ ಪರಿಚಯಿಸಿದ್ದರು. ಇದನ್ನು ನೋಡಿ ಅಂದು ರಾಧಿಕಾ ಮಾತನಾಡಿದ್ದ ವೀಡಿಯೋ ವೈರಲ್ ಮಾಡಲಾಗ್ತಿದೆ.

'ಬಹದ್ದೂರ್' ಸಿನಿಮಾ ಮುಹೂರ್ತ ಸಮಾರಂಭದಲ್ಲಿ ರಾಜ್ ಮ್ಯೂಸಿಕ್ ವಾಹಿನಿಯ 'ಸ್ಟ್ರೈಟ್ ಹಿಟ್ ಸುಗುಣ' ಸಂದರ್ಶನ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಭಾಗವಹಿಸಿದ್ದರು. ನೇರಾನೇರಾ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ ಬಾಂಬೆನಲ್ಲಿ ರಾಧಿಕಾ ಅವರಿಗೆ ಬಾಯ್‌ಫ್ರೆಂಡ್ ಇದ್ದಾರಂತೆ ಹೌದಾ ಎನ್ನುವ ಪ್ರಶ್ನೆ ಎದುರಾಗಿತ್ತು. "ಬಾಂಬೆನಲ್ಲಾ... ರಣ್‌ಬೀರ್ ಕಪೂರಾ ? ಐ ವಿಲ್ ಬಿ ಹ್ಯಾಪಿ" ಎಂದಿದ್ದರು. ಆ ಮೂಲಕ ಬಾಯ್‌ಫ್ರೆಂಡ್ ವಿಚಾರ ಗಾಸಿಪ್ ಅಷ್ಟೆ ಎಂದು ಸ್ಪಷ್ಟಪಡಿಸಿದ್ದರು. ಜೊತೆಗೆ ತಾವು ರಣ್‌ಬೀರ್ ಅಭಿಮಾನಿ ಎನ್ನುವುದನ್ನು ರಾಧಿಕಾ ಪರೋಕ್ಷವಾಗಿ ತಿಳಿಸಿದ್ದರು.

2014ರಲ್ಲಿ 'ಬಹದ್ದೂರ್' ಸಿನಿಮಾ ಬಂದಿತ್ತು. ಅದಾಗಲೇ 'ಡ್ರಾಮಾ' ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ನಟಿಸಿದ್ದರು. ಇಬ್ಬರ ಪರಿಚಯ ಹಾಗೂ ಸ್ನೇಹ ಶುರುವಾಗಿತ್ತು. 2016ರ ವೇಳೆಗೆ ಇಬ್ಬರೂ ಪ್ರೀತಿಸಿ ಮದುವೆ ಆದರು. ಮದುವೆ ಬಳಿಕ ರಾಧಿಕಾ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿಲ್ಲ. ರಾವಣನಾಗಿ ಯಶ್ 'ರಾಮಾಯಣ' ಚಿತ್ರದಲ್ಲಿ ನಟಿಸಿದ್ರು ಇನ್ನು ರಣ್‌ಬೀರ್ ಜೊತೆ ತೆರೆ ಹಂಚಿಕೊಂಡಿಲ್ಲ. ಒಂದೆರಡು ಬಾರಿ ಭೇಟಿ ಮಾಡಿದ್ದಾರೆ ಅಷ್ಟೆ. ಇದನ್ನು ಯಶ್ ಹೇಳಿಕೊಂಡಿದ್ದರು.

ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ಮೊದಲ ಭಾಗದಲ್ಲಿ ಸೀತಾಪಹರಣದ ಸನ್ನಿವೇಶದವರೆಗೆ ಮಾತ್ರ ಕಥೆ ಇರಲಿದೆ. ಹಾಗಾಗಿ ಶ್ರೀರಾಮ ಹಾಗೂ ರಾವಣ ಮುಖಾಮುಖಿ ಆಗುವುದಿಲ್ಲ. ಅದೇ ಕಾರಣಕ್ಕೆ ಯಶ್-ರಣ್‌ಬೀರ್ ಒಟ್ಟಿಗೆ ಇನ್ನು ತೆರೆ ಹಂಚಿಕೊಂಡಿಲ್ಲ.