ನಟ ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವು ಇನ್ನು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಐದನೇ ವರ್ಷದ ಅಪ್ಪು ಪುಣ್ಯಸ್ಮರಣೆಗೆ ಸಿದ್ಧತೆ ನಡೀತಿದೆ. ಅಕ್ಟೋಬರ್ 29, 2021ರಂದು ಹೃದಯಾಘಾತದಿಂದ ಅವರು ನಿಧನರಾಗಿದ್ದರು. ವ್ಯಾಯಾಮ ಮಾಡಿದ ಬಳಿಕ ಆರೋಗ್ಯದ ಏರುಪೇರಾಗಿ ಪುನೀತ್ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಆದರೆ ಆಸ್ಪತ್ರೆ ತಲುಪುವ ಮುನ್ನ ಸಮಯ ಮೀರಿ ಹೋಗಿತ್ತು. ಈ ಬಗ್ಗೆ ಡಾ. ರಮಣ ರಾವ್ ನೆನಪು ಮಾಡಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ನಿವಾಸದ ಬಳಿ ಡಾ. ರಮಣ ರಾವ್ ಅವರ ಕ್ಲಿನಿಕ್ ಇದೆ. ಅಂದು ವ್ಯಾಯಾಮ ಮಾಡಿ ಸುಸ್ತಾಗುತ್ತಿದೆ ಎನಿಸಿದಾಗ ಮೊದಲಿಗೆ ಅದೇ ಕ್ಲಿನಿಕ್‌ಗೆ ಅಪ್ಪು ತೆರಳಿಸಿದ್ದರು. ಅಂದು ಏನೆಲ್ಲಾ ಆಯ್ತು ಎನ್ನುವುದನ್ನು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಡಾ. ರಮಣ ರಾವ್ ಹೇಳಿದ್ದಾರೆ. "ಅವತ್ತು ನಾನು ಕ್ಲಿನಿಕ್‌ನಲ್ಲಿ ಇದ್ದೆ. ಬಹಳ ಬೆವತು ಅಪ್ಪು ಅಲ್ಲಿಗೆ ಬಂದ್ರು.. ಒಂದೂವರೆ ಗಂಟೆ ಜಿಮ್‌ನಲ್ಲಿ ಕಿಕ್ ಬಾಕ್ಸಿಂಗ್ ಮಾಡಿ ಈಗಷ್ಟೆ ಬಂದೆ, ಸುಸ್ತಾಗ್ತಿದೆ ಅಂದ್ರು. ಬೆವತ್ತಿದ್ದು ನೋಡುತ್ತಿದ್ದಂತೆ ECG ಮಾಡಿದ್ವಿ.. ಅದ್ರಲ್ಲಿ ಹಾರ್ಟ್ ಅಟ್ಯಾಕ್ ಅಲ್ಲ. ಸ್ಟ್ರೇನ್ ಅಂತ ತೋರಿಸ್ತು" ಎಂದು ಡಾ. ರಮಣ ರಾವ್ ಹೇಳಿದ್ದಾರೆ.

ಆ ತರ ಲಕ್ಷಣ ಕಂಡು ಬಂದ್ರೆ, ನಮ್ಮ ತಂದೆಗೆ ಅಥವಾ ಮಗನಿಗೆ ಯಾವ ಮೆಡಿಸಿನ್ ಕೊಡ್ತಿನೋ ಅದೇ ಅಪ್ಪುಗೆ ಕೊಟ್ಟೆ. ಕೂಡಲೇ ಅವರದ್ದೇ ಕಾರಿನಲ್ಲಿ ಆಸ್ಪತ್ರೆಗೆ ತೆರೆಳುವಂತೆ ಸೂಚಿಸಿದ್ದೆ ಎಂದು ಡಾ. ರಮಣ ರಾವ್ ಅಂದಿನ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. "ಅವ್ರು ನಮ್ ಕ್ಲಿನಿಕ್‌ನಲ್ಲಿ ಚೆನ್ನಾಗಿ ಮಾತನಾಡಿ ಹೊರಟ್ರು.. ಇಲ್ಲೇ ಕೂರ್ತೀನಿ ಅಂದ್ರು, ಬೇಡ ಆಸ್ಪತ್ರೆಗೆ ಹೊರಡಿ ಅಂದೆ. ಕಾರಿನಲ್ಲಿ ಅಶ್ವಿನಿ ಮಡಿಲಲ್ಲಿ ಮಲಗಲು ಹೇಳ್ದೆ. ಕಾರಿನ ಚಾಲಕನಿಗೆ ಕೂಡ ಬೇಗ ಆಸ್ಪತ್ರೆಗೆ ಹೋಗು ಅಂದೆ. ಆಸ್ಪತ್ರೆಯಲ್ಲಿ ಎಲ್ಲಾ ಸಿದ್ಧತೆ ಆಗ್ತಿತ್ತು. ಡಾ. ರಂಗನಾಯಕ್ ದೊಡ್ಮನೆಯ ಎಲ್ಲಾ ಸದಸ್ಯರ ಹೃದಯಸಂಬಂಧಿ ಸಮಸ್ಯೆ ಚಿಕಿತ್ಸೆ ನೀಡಿದವರು. ಆದ್ರೆ, ಆಸ್ಪತ್ರೆ ತಲುಪುವ ಕೆಲವೇ ಕ್ಷಣಗಳ ಹಿಂದೆ ಅಪ್ಪು ಹೃದಯ ಬಡಿತ ನಿಂತಿತ್ತು. ಆಸ್ಪತ್ರೆಯವರು ಇದನ್ನ ಹೇಳಿದ್ರು" ಎಂದು ವಿವರಿಸಿದ್ದಾರೆ.

ಆಸ್ಪತ್ರೆ ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿ ಪುನೀತ್ ರಾಜ್‌ಕುಮಾರ್ ಅವರನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಇದು ನನ್ನ ಜೀವನದ ಬಹಳ ದುರಂತ ಘಟನೆ ಎಂದು ಡಾ. ರಮಣ ರಾವ್ ತಿಳಿಸಿದ್ದಾರೆ.