ದರ್ಶನ್ ಆಪ್ತ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲೇ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿದ್ದರು. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರುವ ಹಂತಕ್ಕೆ ಹೋಗಿದೆ. ತಮಗೆ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಆಪ್ತ ಮ್ಯಾನೇಜರ್ ನಾಗರಾಜ್ ದೂರು ನೀಡಿದ್ದರು. ಇದೀಗ ನಾಗರಾಜ್ ಹಾಗೂ ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆ ತಿಮ್ಮೇಗೌಡ ದೂರು ದಾಖಲಿಸಿದ್ದಾರೆ.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 21ರಂದು ಧನ್ವೀರ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ನಮ್ಮ ಮನೆಗೆ ಬಂದಿದ್ದರು. ಬಂದ ಕೂಡಲೇ ಧನ್ವೀರ್ ಎಲ್ಲಿದ್ದಾನೆ, ಧನ್ವೀರ್ ಅಪ್ಪ ಎಲ್ಲಿದ್ದಾನೆ? ಎಂದು ಕೂಗಾಡಿದ್ದರು. ಏನಿದು ಗಲಾಟೆ ಎಂದು ಸಂಬಂಧಿ ಅಜಯ್ ಗೌಡ ಬಂದು ಕೇಳಿದ್ದರು. ಕೂಡಲೇ "ನೀವು ರೌಡಿಯನ್ನು ಕರೆಸುತ್ತೀರಾ? ಈಗ ನೋಡಿ ನಾನು ರೌಡಿಗಳನ್ನು ಹೇಗೆ ಕರೆಸುತ್ತೇನೆ" ನಾಗರಾಜ್ ಕೂಗಾಡಿದ್ದ ಎಂದು ತಿಮ್ಮೇಗೌಡ ತಮ್ಮ ದೂರಿನಲ್ಲಿ ಅಂದು ನಡೆದ ಘಟನೆ ವಿವರಿಸಿದ್ದಾರೆ.

ಗಲಾಟೆ ಸದ್ದು ಕೇಳಿ ಊಟ ಮುಗಿಸಿ ಬಂದು ನಾನು(ತಿಮ್ಮೇಗೌಡ) "ನಮ್ಮ ಮನೆಗೆ ಬಂದು ಯಾವ ರೌಡಿ ಬಗ್ಗೆ ಮಾತನಾಡುತ್ತಿದ್ದೀಯಾ?" ಎಂದು ವಿಜಯಲಕ್ಷ್ಮಿ ದರ್ಶನ್ ಮ್ಯಾನೇಜರ್ ನಾಗರಾಜ್‌ನನ್ನು ಪ್ರಶ್ನಿಸಿದೆ. ಕೂಡಲೇ ಗೌರವ್ ಶೆಟ್ಟಿಗೆ ಫೋನ್ ಮಾಡಿ "ಬೋಜಣ್ಣ ಹಾಗೂ ಬಾಟಲಿ ಪ್ರಮೋದ್‌ನನ್ನು ಕಳುಹಿಸು" ಎಂದು ನಾಗರಾಜ್‌ಗೆ ಹೇಳಲು ಸೂಚಿಸಿದ್ದರು. ನಾಗರಾಜ್ ಫೋನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬೋಜ ಹಾಗೂ ಬಾಟಲಿ ಪ್ರಮೋದ್ ಎಂಬುವವರು ಮನೆಗೆ ಬಂದು "ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕು ಅಂತ ನಮಗೆ ಗೊತ್ತಿದೆ" ಎಂದು ಗಲಾಟೆ ಮಾಡಿ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ.

"ನಮ್ಮ ಮನೆಗೆ ಬಂದು ನಮಗೆ ಬೈದು ಕೊಲೆ ಬೆದರಿಕೆ ಹಾಕ್ತೀರಾ, ನಾನು ಪೊಲೀಸರಿಗೆ ಫೋನ್ ಮಾಡಿ ಇಲ್ಲೇ ಕರೆಸ್ತೀನಿ" ಎನ್ನುತ್ತಿದ್ದಂತೆ ವಿಜಯಲಕ್ಷ್ಮಿ, ನಾಗರಾಜ್, ಭೋಜ ಹಾಗೂ ಬಾಟಲಿ ಪ್ರಮೋದ್ ಎಲ್ಲರೂ ಕೂಗಾಡುತ್ತಾ ಕಾರು ಏರಿ ಹೊರಟುಬಿಟ್ಟರು. ಈ ಸಂಬಂಧ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ನಮ್ಮ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಕೊಡಿಸಿ ಎಂದು ಧನ್ವೀರ್ ತಂದೆ ತಿಮ್ಮೆಗೌಡ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಗೌರವ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು. ಇದೇ ಗೌರವ್ ಶೆಟ್ಟಿನನ್ನು ಧನ್ವೀರ್ ಗೌಡ ಮನೆಗೆ ಕರೆಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಹಾಗಾಗಿ ಈ ಪ್ರಕರಣ ಯಾವ ತಿರುವು ಪಡೆಯುತ್ತೋ ಕಾದು ನೋಡಬೇಕು.